ಚಿನ್ನದ ಮೇಲಿನ ಹೂಡಿಕೆಯನ್ನು ಶಾಶ್ವತ ಹೂಡಿಕೆ ಆಯ್ಕೆ ಎಂದು ಪರಿಗಣಿಸಲು ಹಲವು ಕಾರಣಗಳು

ಚಿನ್ನದ ಮೇಲಿನ ಹೂಡಿಕೆಯನ್ನು ಶಾಶ್ವತ ಹೂಡಿಕೆ ಆಯ್ಕೆ ಎಂದು ಪರಿಗಣಿಸಲು ಹಲವು ಕಾರಣಗಳು
-ಕವಿತಾ ಸುಬ್ರಮಣಿಯನ್, ಸಹ ಸಂಸ್ಥಾಪಕಿ, ಅಪ್‌ಸ್ಟಾಕ್ಸ್
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಭಾರತದ ಹೂಡಿಕೆಯ ಕ್ಷೇತ್ರವು ಅಭಿವೃದ್ಧಿಯ ಹಾದಿಯಲ್ಲಿದೆ. ನಾವು ನಿಧಾನಕ್ಕೆ ಉಳಿತಾಯ ಆಧರಿಸಿದ ಆರ್ಥಿಕತೆಯಿಂದ ಹೂಡಿಕೆದಾರರ ಆರ್ಥಿಕತೆಗೆ ಬದಲಾವಣೆ ಹೊಂದುತ್ತಿದ್ದೇವೆ. ನಮ್ಮ ಮುಂದೆ ಹೂಡಿಕೆಯ ಆಯ್ಕೆಗಳ (ಸ್ಟಾಕ್‌ಗಳು, ಮ್ಯೂಚುಯಲ್ ಫಂಡ್‌ಗಳು, ಐಪಿಓಗಳು, ಚಿನ್ನ ಮತ್ತು ಫಿಕ್ಸ್ ಡ್ ಇನ್ ಕಮ್ ಉತ್ಪನ್ನಗಳು) ದೊಡ್ಡ ಶ್ರೇಣಿಯೇ ಇದೆ. ಹೂಡಿಕೆದಾರರು ಸರಿಯಾದ ಮಾಹಿತಿ ಪಡೆಯುವ ಮೂಲಕ ಸರಿಯಾಗಿ ಹೂಡಿಕೆ ಮಾಡಬಹುದಾಗಿದೆ ಮತ್ತು ತಮ್ಮ ಪೋರ್ಟೋಪೋಲಿಯೋವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಜನರ ಮುಂದೆ ಹಲವಾರು ಹೂಡಿಕೆ ಉತ್ಪನ್ನಗಳಿದ್ದರೂ ಸಹ, ಚಿನ್ನದ ಮೇಲೆ ಹೂಡಿಕೆ ಮಾಡುವುದು ಭಾರತೀಯರ ಮುಂದೆ ಇರುವ ಅತ್ಯಂತ ಪುರಾತನ ಮತ್ತು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ. ಅದಕ್ಕೆ ಗಟ್ಟಿಯಾದ ಸಾಂಸ್ಕೃತಿಕ ಇತಿಹಾಸವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಚಿನ್ನವು ಹಲವು ಬಾರಿ ಬೆಲೆ ಏರಿಕೆಗಳನ್ನು ಕಂಡಿದೆ. 2023ರ ಕ್ಯಾಲೆಂಡರ್ ವರ್ಷದಲ್ಲಿ ~25% ಮತ್ತು 2024ರಲ್ಲಿ ~12% (ರೂ. ಗಳಲ್ಲಿ) ಬೆಲೆ ಏರಿಕೆ ಆಗಿದೆ. ಇದು ಚಿನ್ನದ ಮೇಲೆ ಹೂಡಿಕೆಯು ಅತ್ಯುತ್ತಮ ಎಂಬುದಕ್ಕೆ ಕಾರಣವಾಗಿದೆ ಮತ್ತು ಚಿನ್ನದ ಮೇಲಿನ ಆಸಕ್ತಿಯಲ್ಲಿ ಹೆಚ್ಚಳ ಉಂಟಾಗಿರುವುದಕ್ಕೆ ಪುರಾವೆಯಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವಾರು ಕಾರಣಗಳಿವೆ ಮತ್ತು ಚಿನ್ನವು ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಳಲ್ಲಿ ಒಂದಾಗಿದೆ. ಕೆಲವು ಕಾರಣಗಳನ್ನು ಇಲ್ಲಿ ನೀಡಲಾಗಿದೆ:

ಹಣದುಬ್ಬರದ ವಿರುದ್ಧ ರಕ್ಷಣೆಯಾಗಿ ಬಳಸಿಕೊಳ್ಳಬಹುದು: ಹಣದುಬ್ಬರ ಹೆಚ್ಚಾದಂತೆ, ಕರೆನ್ಸಿಯನ್ನು ಖರೀದಿಸುವ ಶಕ್ತಿಯು ಕಡಿಮೆಯಾಗುತ್ತದೆ. ನೀವು ಇತಿಹಾಸವನ್ನು ನೋಡಿದರೆ ದೀರ್ಘಾವಧಿಯಲ್ಲಿ ಚಿನ್ನಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮುಖ ಕರೆನ್ಸಿಗಳು ಮೌಲ್ಯ ಕಳೆದುಕೊಂಡಿರುವುದನ್ನು ಗಮನಿಸಬಹುದು. ಹೀಗಾಗಿ, ಚಿನ್ನವು ಹಣದುಬ್ಬರದ ಒತ್ತಡಗಳ ವಿರುದ್ಧ ರಕ್ಷಣೆಯಂತೆ ಕಾರ್ಯ ನಿರ್ವಹಿಸುತ್ತದೆ. ಕಾಲಾನಂತರದಲ್ಲಿ ಸಂಪತ್ತನ್ನು ಸಂರಕ್ಷಿಸುವ ಸಾಧನವಾಗಿ ಬಳಕೆಯಾಗುತ್ತದೆ.

 Advertisement

ಜಾಹೀರಾತಿಗಾಗಿ ಸಂಪರ್ಕಿಸಿ 6362546216

ತುಲನಾತ್ಮಕವಾಗಿ ಅಪಾಯಗಳು ಕಡಿಮೆ: ಚಿನ್ನದ ಮೇಲೆ ಹೂಡಿಕೆ ಮಾಡುವುದರ ಮತ್ತೊಂದು ಲಾಭವೆಂದರೆ ಅದರಿಂದ ಮಾರುಕಟ್ಟೆಯ ಚಲನವಲನಗಳು ಮತ್ತು ಏರಿಳಿತಗಳಲ್ಲಿಯೂ ನಿಮ್ಮ ಹೂಡಿಕೆಯೂ ಸ್ಥಿರವಾಗಿ ನಿಲ್ಲುತ್ತದೆ ಎಂಬುದು. ಚಿನ್ನವು ಬಂಡವಾಳದ ಅಸ್ಥಿರತೆಯನ್ನು ಕಡಿಮೆ ಮಾಡುತ್ತದೆ. ಯಾಕೆಂದರೆ ಇತರ ಆಸ್ತಿ ವರ್ಗಗಳ ಮೇಲೆ ಪರಿಣಾಮ ಬೀರಬಹುದಾದ ಸೂಕ್ಷ್ಮ ಮತ್ತು ಸ್ಥೂಲ ಅಂಶಗಳು ಚಿನ್ನದ ಮೌಲ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಇದರ ಅರ್ಥ ಏನೆಂದರೆ ಚಿನ್ನದ ಮೌಲ್ಯಕ್ಕೂ ಕಂಪನಿಗಳ ಕಾರ್ಯಕ್ಷಮತೆ ಅಥವಾ ಆರ್ಥಿಕ ಸೂಚ್ಯಂಕಗಳಿಗೂ ನೇರವಾಗಿ ಯಾವುದೇ ಸಂಬಂಧ ಇರುವುದಿಲ್ಲ. ಪರಿಣಾಮವಾಗಿ, ನಿಮ್ಮ ಪೋರ್ಟ್‌ಫೋಲಿಯೊದಲ್ಲಿರುವ ಇತರ ಆಸ್ತಿಗಳ ಬೆಲೆ ಅಥವಾ ಮೌಲ್ಯ ಮೇಲು ಕೆಳಗೆ ಆದರೂ ಚಿನ್ನ ಮಾತ್ರ ಸಂರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಪೋರ್ಟ್‌ಫೋಲಿಯೊ ಮೌಲ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಚಿನ್ನವು ಅತ್ಯುತ್ತಮ ಲಿಕ್ವಿಡ್ ಅಸೆಟ್ ಆಗಿದೆ: ಲಿಕ್ವಿಡಿಟಿ ಎಂದರೆ ವಿವಿಧ ರೂಪಗಳಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಸುಲಭವಾಗುವ ವಸ್ತು. ಲಿಕ್ವಿಡ್ ಅಸೆಟ್ ಅಂದರೆ ಅತಿ ಕಡಿಮೆ ಸಮಯದಲ್ಲಿ ಅದನ್ನು ಹಣಕ್ಕೆ ಪರಿವರ್ತಿಸಬಹುದಾಗಿದೆ. ಚಿನ್ನವು ಲಭ್ಯವಿರುವ ಅತ್ಯುತ್ತಮ ಲಿಕ್ವಿಡ್ ಹೂಡಿಕೆ ಸಾಧನಗಳಲ್ಲಿ ಒಂದಾಗಿರುವುದರಿಂದ ಅದನ್ನು ಅಗತ್ಯಕ್ಕೆ ತಕ್ಕಂತೆ ತ್ವರಿತವಾಗಿ ಮತ್ತು ಸುಲಭವಾಗಿ ನಗದು ರೂಪಕ್ಕೆ ಬದಲಾಯಿಸಬಹುದು. ಈ ಪ್ರಯೋಜನದ ಕಾರಣಕ್ಕೆ ಹೂಡಿಕೆದಾರರು ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ತಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಚಿನ್ನದ ಮೊರೆ ಹೋಗಬಹುದು.

ಆರಂಭಿಕ ಹಂತದಲ್ಲಿರುವವರು ಚಿನ್ನದ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಅವರು ಚಿಕ್ಕದಾಗಿ ಹೂಡಿಕೆ ಪ್ರಾರಂಭಿಸುವುದು, ವೈವಿಧ್ಯತೆಯನ್ನು ಪಾಲಿಸುವುದು ಮತ್ತು ದೀರ್ಘಾವಧಿಯ ಹೂಡಿಕೆಯಾಗಿ ಚಿನ್ನದ ಹೂಡಿಕೆಯ ಮೇಲೆ ಗಮನ ಹರಿಸುವುದನ್ನು ಮಾಡಬಹುದು. ಚಿನ್ನದ ಮೇಲೆ ಹೂಡಿಕೆ ಮಾಡಲು ಸಾರ್ವಭೌಮ ಗೋಲ್ಡ್ ಬಾಂಡ್‌ಗಳು ಅತ್ಯಂತ ಅನುಕೂಲಕರ ಸಾಧನವಾಗಿದ್ದರೂ, ಒಂದು ವೇಳೆ ನಿರ್ದಿಷ್ಟ ಸಮಯದಲ್ಲಿ ಯಾವುದೇ ಟ್ರ್ಯಾಂಚ್ ಆರಂಭ ಇಲ್ಲದಿದ್ದರೆ ಹೂಡಿಕೆದಾರರು ಚಿನ್ನದ ಇಟಿಎಫ್‌ಗಳು ಮತ್ತು ಗೋಲ್ಡ್ ಮ್ಯೂಚುಯಲ್ ಫಂಡ್‌ಗಳ ಮೂಲಕ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆ ಮಾಡುವಾಗ ಅವರು ಅವರ ಒಟ್ಟಾರೆ ಹೂಡಿಕೆ ಉದ್ದೇಶ, ಹೂಡಿಕೆಗಳ ಸಮಯಾವಧಿ ಮತ್ತು ಮಾರುಕಟ್ಟೆಯ ಟ್ರೆಂಡ್ ಗಳನ್ನು ಹತ್ತಿರದಿಂದ ಗಮನಿಸುವುದು ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸುವುದು ಅತ್ಯಗತ್ಯ.

 

ಯಾವುದೇ ಹೂಡಿಕೆಯು ಯಶಸ್ವಿಯಾಗಬೇಕೆಂದರೆ ಮತ್ತು ಲಾಭದಾಯಕವಾಗಿರಬೇಕೆಂದರೆ ಹೂಡಿಕೆದಾರರು ಈ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯುವುದು ಅವಶ್ಯವಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿನ ಗದ್ದಲದ ಕಡೆಗೆ ಗಮನ ಕೊಡದೆ ವಿವೇಕಯುಕ್ತ ಮತ್ತು ಬುದ್ಧಿವಂತ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ವಿಯಾಗಿ.