ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರ ಆಗಸ್ಟ್ 15ಕ್ಕೆ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ
Krishnam Pranaya Sakhi will hit theaters on August 15.

ಬೆಂಗಳೂರು: ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರ ಆಗಸ್ಟ್ 15ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ಹಾಡುಗಳು, ಅದರಲ್ಲೂ ದ್ವಾಪರ ಹಾಡು ಎಲ್ಲಾ ಕಡೆ ಟ್ರೆಂಡ್ ಆಗಿ ಓಡಾಡುತ್ತಿರುವುದು ಗೊತ್ತಿರಬೇಕು. ಆ ಹಾಡಿಗೆ ಸಿಕ್ಕಿರುವ ಮನ್ನಣೆಯೇ ಕೃಷ್ಣ ಪ್ರಣಯ ಸಖಿ ಸಿನಿಮಾಗೂ ಸಿಕ್ಕುವ ಭರವಸೆಯಲ್ಲಿ ಚಿತ್ರತಂಡವಿದೆ.
ಇಲ್ಲಿವರೆಗೂ ಒಟ್ಟು 4 ಹಾಡುಗಳು ಬಿಡುಗಡೆಯಾಗಿವೆ. ನಾಲ್ಕಕ್ಕೆ ನಾಲ್ಕೂ ಹಿಟ್ ಆಗಿ, ಕೃಷ್ಣಂನ ಇತರೆ ಹಾಡುಗಳನ್ನೂ ರಿಲೀಸ್ ಮಾಡುವಂತೆ ಡಿಮ್ಯಾಂಡ್ ಬರುತ್ತಿದೆಯಂತೆ. ಹಾಗಂತ ಹಾಡಿನ ಹಕ್ಕುಗಳನ್ನು ಖರೀದಿಸಿರುವ ಆನಂದ್ ಆಡಿಯೋದ ಮಾಲೀಕ ಶ್ಯಾಮ್ ಹೇಳಿಕೊಂಡರು. ಈಗಿನ ಸಿನಿಮಾಗಳಲ್ಲಿ ಹೆಚ್ಚೆಂದರೆ ನಾಲ್ಕು ಹಾಡುಗಳಿರುತ್ತವೆ. ಆದರೆ ಕೃಷ್ಣ ಪ್ರಣಯ ಸಖಿ ರೊಮ್ಯಾಂಟಿಕ್ ಮತ್ತು ಮ್ಯೂಸಿಕಲ್ ಲವ್ ಸ್ಟೋರಿಯಾದ್ದರಿಂದ ಇದರಲ್ಲಿ ಏಳು ಹಾಡುಗಳಿವೆಯಂತೆ. ಅವೆಲ್ಲವೂ ಸಿನಿಮಾ ರಿಲೀಸ್ ಆಗುವುದರೊಳಗೆ ಒಂದರ ಹಿಂದೊಂದರಂತೆ ಸೋಷಿಯಲ್ ಮೀಡಿಯಾ ತಲುಪುವುದಾಗಿ ಹೇಳಿದರು ಶ್ಯಾಮ್. 'ಈ ಚಿತ್ರಕ್ಕೆ ಯಾವುದೇ ರೀತಿಯ ಟ್ರೇಲರ್ ಕಟ್ ಮಾಡಿಲ್ಲ. ಹಾಡುಗಳೇ ಈ ಚಿತ್ರಕ್ಕೆ ಇನ್ವಿಟೇಷನ್ ಆಗಲಿ ಎಂಬ ಉದ್ದೇಶದಿಂದ ಅದನ್ನೇ ಜಾಸ್ತಿ ಪ್ರಮೋಟ್ ಮಾಡುತ್ತಿದ್ದೇವೆ. ನನ್ನ ರೆಗ್ಯೂಲರ್ ಜಾನರ್‌ನಿಂದ ಆಚೆ ಬಂದು ಮಾಡಿರುವ ಚಿತ್ರವಿದು' ಎನ್ನುತ್ತಾರೆ ದಂಡುಪಾಳ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು.
ನಟ ಗಣೇಶ್ ಕೂಡಾ ಸಿನಿಮಾದ ಹಾಡುಗಳಿಗೆ ಸಿಕ್ಕಿರುವ ಪ್ರಶಂಸೆ ನೋಡಿ ಉಲ್ಲಸಿತರಾದಂತೆ ಕಂಡುಬಂದರು. 'ಪ್ರತಿ ಹಾಡೂ ಹಿಟ್ ಆಗಬೇಕು ಹಾಗೆ ಮಾಡುತ್ತೇನೆ ಎಂದು ಅರ್ಜುನ್ ಜನ್ಯ ಹೇಳುತ್ತಿದ್ದರು. ಅದೇ ರೀತಿ ಮಾಡಿ ತೋರಿಸಿದ್ದಾರೆ. ಏನೇ ಬ್ಯುಸಿ ಇದ್ದರೂ ಕೃಷ್ಣಂ ಪ್ರಣಯ ಸಖಿ ಹಾಡುಗಳಿಗೆ ಯಾವುದೇ ಧಕ್ಕೆ ಬಾರದಂತೆ ಕೆಲಸ ಮಾಡಿಕೊಟ್ಟಿರುವ ಅವರಿಗೆ ಮೆಚ್ಚುಗೆ ಹೇಳಲೇಬೇಕು' ಎಂದರು ಗಣೇಶ್. ಕೃಷ್ಣನಿಗೆ ಜೋಡಿಯಾಗಿ ಮಾಲವಿಕಾ ನಾಯರ್, ಶರಣ್ಯ ಶೆಟ್ಟಿ ಮೊದಲಾದವರು ಅಭಿನಯಿಸಿದ್ದು ನಿರ್ಮಾಪಕ ಪ್ರಶಾಂಜ್ ಜಿ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.