ಅಕ್ರಮ ಗಣಿಗಾರಿಕೆ ಲೂಟಿಕೋರರ ಪರ ನಿಂತಿರುವ ಕಾಂಗ್ರೆಸ್ ಸರ್ಕಾರ, ಕೂಡಲೆ ಓಟಿಎಸ್ ನೀತಿಯನ್ನು ರದ್ದುಗೊಳಿಸಿ - ಆಮ್ ಆದ್ಮಿ ಪಕ್ಷದ ಆಗ್ರಹ
Aam Aadmi Party demands Congress Govt stand for illegal mining looters, cancel OTS policy immediately
ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣಕಾಸು ಕ್ರೂಡೀಕರಣದ ನೆಪದಲ್ಲಿ ರಾಜ್ಯದಲ್ಲಿ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆಗಳನ್ನು ಮಾಡಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಗಣಿ ಮಾಲೀಕರುಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ಓಟಿಎಸ್ ಪದ್ದತಿಯನ್ನು ಜಾರಿಗೆ ತಂದಿರುವುದು ಸರ್ಕಾರ ಲೂಟಿಕೋರರ ಪರ ನಿಂತಿರುವುದು ಸ್ಪಷ್ಟವಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಜಿಎಸ್‌ಟಿ ಕಟ್ಟದೆ ಸಾವಿರಾರು ಕೋಟಿ ವಂಚಿಸಿರುವ ವಂಚಕರಿಗೂ ಸಹ ಈ ಓ ಟಿ ಎಸ್ ನೀತಿಯನ್ನು ಜಾರಿಗೆ ತರುತ್ತಿರುವುದು ಮತ್ತಷ್ಟು ಆತಂಕದ ಸಂಗತಿ. ಈಗಾಗಲೇ ಅಕ್ರಮ ಗಣಿಗಾರಿಕೆಗಳ ವಿರುದ್ಧ ಹೋರಾಟ ಮಾಡುತ್ತಿರುವ ಎಸ್. ಟಿ. ಹಿರೇಮಠ್ ದಂತಹ ಹೋರಾಟಗಾರರಿಗೆ ಮಾಡುತ್ತಿರುವ ಅಪಮಾನ ಹಾಗೂ ಮುಂದಿನ ಪೀಳಿಗೆಗಳಿಗೆ ರಾಜ್ಯದ ನೈಸರ್ಗಿಕ ಸಂಪತ್ತನ್ನು ಉಳಿಸದೆ ಎಲ್ಲವನ್ನು ತಮ್ಮ ಅವಧಿಯಲ್ಲಿ ಯೇ ಲೂಟಿ ಮಾಡಿ ಸರ್ಕಾರ ಉಳಿಸಿಕೊಳ್ಳುವ ಇರಾದೆ ಎಂದು ಜಗದೀಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜನಪ್ಪ ದಾಖಲೆಗಳನ್ನು ಬಿಡುಗಡೆ ಮಾಡಿ ಪಾವಗಡ ಕ್ಷೇತ್ರದ ಶಾಸಕ ಎಚ್.ವಿ. ವೆಂಕಟೇಶ್ ರವರ ಪತ್ನಿಯ ಒಡೆತನದ ವೆಂಕಟೇಶ್ವರ ಸ್ಟೋನ್ ಕ್ರಷರ್ ಈಗಾಗಲೇ ಸರ್ಕಾರಕ್ಕೆ 10 ಕೋಟಿಗಳಿಗೂ ಹೆಚ್ಚು ರಾಜಧನ ಹಾಗೂ ದಂಡದ ಮೊತ್ತ ಬಾಕಿ ಉಳಿಸಿಕೊಂಡಿದೆ. ಇವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಓಟಿಎಸ್ ನೀತಿಯ ಮೂಲಕ ಅವರ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ. ಈ ಕೂಡಲೇ ಅನಿಷ್ಟ ಓ ಟಿ ಎಸ್ ಅನ್ನು ರದ್ದುಗೊಳಿಸಬೇಕು ಹಾಗೂ ಅಕ್ರಮ ಗಣಿ ಮಾಲೀಕರುಗಳ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಹಣಕಾಸಿನ ಕ್ರೂರಿಕರಣ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ಶಾಸಕ ವೆಂಕಟೇಶ್ 20 ಎಕರೆ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದು ಇವರ ಮೇಲೆ ಹಾಕಿರುವ ದಂಡದ ಮೊತ್ತ ಕೇವಲ ಐದು ಎಕರೆಗಳಿಗೆ ಮಾತ್ರ ಆಗಿದೆ. ಈ ದಂಡದ ಮೊತ್ತ 40 ಕೋಟಿಗೂ ಹೆಚ್ಚು ಆಗಿದ್ದು ಕೂಡಲೇ ಮರುಪರಿಶೀಲಿಸಿ ಹಾಲಿ ಶಾಸಕರ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಹಾಗೂ ಕೂಡಲೇ ಅವರ ಬಳಿ ದಂಡದ ಮೊತ್ತವನ್ನು ವಸೂಲಿ ಮಾಡಿ ರಾಜ್ಯದ ಬೊಕ್ಕಸಕ್ಕೆ ತುಂಬಿಸಬೇಕೆಂದು ಆಗ್ರಹಿಸಿದರು. ಇದೇ ರೀತಿ ರಾಜ್ಯದ ಅನೇಕ ಹಾಲಿ ಶಾಸಕರುಗಳು ಮಾಜಿ ಶಾಸಕರುಗಳು ಮಂತ್ರಿಗಳು ಅಕ್ರಮ ಗಣಿಗಾರಿಕೆಯಲ್ಲಿ ನಿರತರಾಗಿದ್ದು ದಂಡದ ಮೊತ್ತ ಸಾವಿರಾರು ಕೋಟಿ ಆಗಿದೆ. ಇವರುಗಳನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ನಿಂತಿರುವುದು ರಾಜ್ಯದ ದೌರ್ಭಾಗ್ಯ , ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳುತ್ತಿದ್ದಲ್ಲಿ ಆಮ್ ಆದ್ಮಿ ಪಕ್ಷ ಬೃಹತ್ ಜನಾಂದೋಲನಕ್ಕೆ ಸಿದ್ಧವಾಗಲಿದೆ ಎಂದು ರಾಮಾಂಜಿನಪ್ಪ ಸರ್ಕಾರವನ್ನು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಜಯರಾಮಯ್ಯ ಹಾಗೂ ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು.