ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ ಬೋರ್ಡ್ ನೂತನ ಅಧ್ಯಕ್ಷೆಯಾಗಿ ಸಂಗೀತಾ ಜಿಂದಾಲ್ ಆಯ್ಕೆ
ಬೆಂಗಳೂರು : ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ ಬೋರ್ಡ್ ನ ನೂತನ ಅಧ್ಯಕ್ಷೆಯಾಗಿ ಸಂಗೀತಾ ಜಿಂದಾಲ್ ಅವರನ್ನು ಮಂಡಳಿಯು ಆಯ್ಯೆ ಮಾಡಿದೆ. ಸಂಗೀತಾ ಜಿಂದಾಲ್ ಅವರ ಕಾರ್ಯ ನಿರ್ವಹಣೆ ಏಪ್ರಿಲ್ 1, 2024ರಿಂದ ಆರಂಭವಾಗಿದೆ.
“ಸಂಗೀತಾ ಜಿಂದಾಲ್ ಅವರನ್ನು ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ ಬೋರ್ಡ್ನ ಅಧ್ಯಕ್ಷರಾಗಿ ಸ್ವಾಗತಿಸಲು ನಾನು ತುಂಬಾ ಸಂತೋಷ ಪಡುತ್ತೇನೆ. ಅವರು ದಕ್ಷಿಣ ಏಷ್ಯಾದಲ್ಲಿನ ನಮ್ಮ ಯೋಜನೆಗಳಿಗೆ ಅಪಾರ ಬೆಂಬಲ ನೀಡಿದ್ದಾರೆ ಮತ್ತು ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ಸಮಕಾಲೀನ ಕಲೆ(ಕಂಟೆಂಪರರಿ ಆರ್ಟ್)ಯನ್ನು ಪ್ರೋತ್ಸಾಹಿಸುವ ಅವರ ಕೆಲಸವು ಅಸಾಧಾರಾಣವಾಗಿದೆ; ದಕ್ಷಿಣ ಏಷ್ಯಾದಲ್ಲಿ ಏಷ್ಯಾ ಸೊಸೈಟಿಯ ಶಕ್ತಿಯನ್ನು ಬಲಪಡಿಸಲು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಏಷ್ಯಾ ಸೊಸೈಟಿ ಇಂಡಿಯಾ ಸೆಂಟರ್ ಸಿಇಓ ಇನಾಕ್ಷಿ ಸೊಬ್ತಿ ಹೇಳಿದ್ದಾರೆ.
ಸಂಗೀತಾ ಜಿಂದಾಲ್ ಅವರು ಆರ್ಟ್ ಇಂಡಿಯಾದ ಅಧ್ಯಕ್ಷೆಯಾಗಿದ್ದಾರೆ ಮತ್ತು ಜೆಎಸ್ಡಬ್ಲ್ಯೂ ಗ್ರೂಪ್ ಆಫ್ ಕಂಪನಿಗಳ ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಜೆಎಸ್ಡಬ್ಲ್ಯೂ ಫೌಂಡೇಶನ್ನ ಅಧ್ಯಕ್ಷರೂ ಆಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಜೆಎಸ್ಡಬ್ಲ್ಯೂ ಫೌಂಡೇಶನ್ ಅನ್ನು ಮುನ್ನಡೆಸುತ್ತಿರುವ ಅವರು ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ, ಸ್ಥಳೀಯ ಕ್ರೀಡೆಗಳ ಅಭಿವೃದ್ಧಿ ಮತ್ತು ಕಲೆ ಮತ್ತು ಸಾಂಸ್ಕೃತಿಕ ಪಾರಂಪರಿಕ ತಾಣಗಳ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆ ನಡೆಸಿದ್ದಾರೆ. ಅವರು 1992ರಲ್ಲಿ ಜಿಂದಾಲ್ ಆರ್ಟ್ಸ್ ಸೆಂಟರ್ ಅನ್ನು ಸ್ಥಾಪಿಸಿದರು ಮತ್ತು 1994ರಲ್ಲಿ ಭಾರತದ ಪ್ರಮುಖ ಕಲಾ ನಿಯತಕಾಲಿಕ(ಆರ್ಟ್ ಮ್ಯಾಗಜೀನ್) ಆದ ಆರ್ಟ್ ಇಂಡಿಯಾವನ್ನು ಸ್ಥಾಪಿಸಿದರು. ಅವರು ಕಾಲಾ ಘೋಡಾ ಆರ್ಟ್ಸ್ ಫೆಸ್ಟಿವಲ್ ಅನ್ನು ಪರಿಕಲ್ಪನೆ ಮಾಡಿದ ತಂಡದಲ್ಲಿ ಒಬ್ಬರಾಗಿದ್ದಾರೆ ಮತ್ತು 2004ರಲ್ಲಿ ಐಸೆನ್ಹೋವರ್ ಫೆಲೋಶಿಪ್ ಅನ್ನು ಪಡೆದಿದ್ದಾರೆ. ಅವರು ಹಂಪಿ ಫೌಂಡೇಶನ್ ಅನ್ನು ಕೂಡ ಸ್ಥಾಪಿಸಿದ್ದಾರೆ. ಹಂಪಿಯ ಮೂರು ದೇವಾಲಯಗಳಲ್ಲಿ ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದ್ದಾರೆ. ಅವರು ಏಷ್ಯಾ ಸೊಸೈಟಿಯ ಗ್ಲೋಬಲ್ ಟ್ರಸ್ಟಿ ಆಗಿದ್ದಾರೆ. ರಾಷ್ಟ್ರೀಯ ಸಂಸ್ಕೃತಿ ನಿಧಿ ಮಂಡಳಿಯ ಸದಸ್ಯೆ, ವಿಶ್ವ ಸ್ಮಾರಕ ನಿಧಿಯ ಟ್ರಸ್ಟಿ, ಟೆಡ್ಎಕ್ಸ್ ಗೇಟ್ವೇಯ ಸಲಹೆಗಾರ್ತಿಯೂ ಆಗಿದ್ದಾರೆ. ಐಎಂಸಿ ಲೇಡೀಸ್ ವಿಂಗ್ ಆರ್ಟ್, ಕಲ್ಚರ್ ಆಂಡ್ ಫಿಲ್ಮ್ ಕಮಿಟಿಯ ಸದಸ್ಯೆ ಕೂಡ ಹೌದು.
1956ರಲ್ಲಿ 3ನೇ ಜಾನ್ ಡಿ. ರಾಕ್ಫೆಲ್ಲರ್ ಅವರಿಂದ ಸ್ಥಾಪಿಸಲ್ಪಟ್ಟ ಏಷ್ಯಾ ಸೊಸೈಟಿಯು ನ್ಯೂಯಾರ್ಕ್, ಹೂಸ್ಟನ್ ಮತ್ತು ಹಾಂಗ್ ಕಾಂಗ್ನಲ್ಲಿ ಪ್ರಮುಖ ಕೇಂದ್ರ ಮತ್ತು ಸಾರ್ವಜನಿಕ ಕಟ್ಟಡಗಳನ್ನು ಹೊಂದಿರುವ ಪಕ್ಷಾತೀತ, ಲಾಭರಹಿತ ಸಂಸ್ಥೆಯಾಗಿದೆ. ಇದರ ಕಚೇರಿಗಳು ಲಾಸ್ ಏಂಜಲೀಸ್, ಮನಿಲಾ, ಮೆಲ್ಬೋರ್ನ್, ಮುಂಬೈ, ಸ್ಯಾನ್ ಫ್ರಾನ್ಸಿಸ್ಕೋ, ಸಿಯಾಟಲ್, ಸಿಯೋಲ್, ಸಿಡ್ನಿ, ಟೋಕಿಯೋ, ವಾಷಿಂಗ್ಟನ್ ಡಿ.ಸಿ. ಮತ್ತು ಜ್ಯೂರಿಚ್ ನಲ್ಲಿಯೂ ಇವೆ. ಇದರ ಭಾರತದ ಸೆಂಟರ್ ಅನ್ನು 2006ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ದಕ್ಷಿಣ ಏಷ್ಯಾದ ಏಕೈಕ ಏಷ್ಯಾ ಸೊಸೈಟಿ ಕೇಂದ್ರ ಆಗಿದೆ. ಆಧುನಿಕ ಏಷ್ಯಾದ ವೈವಿಧ್ಯಮಯ ವಿಚಾರಗಳನ್ನು ಒಂದುಗೂಡಿಸುವ ಮತ್ತು ಏಷ್ಯಾ-ಪೆಸಿಫಿಕ್ ವ್ಯವಹಾರಗಳ ಕುರಿತು ಸೂಕ್ಷ್ಮವಾದ ತಿಳುವಳಿಕೆಯನ್ನು ಹೊಂದುವ ಉದ್ದೇಶ ಸಾಧನೆ ಹಿನ್ನೆಲೆಯಲ್ಲಿ ಎಲ್ಲಾ ಉಪಖಂಡವನ್ನು ಒಳಗೊಳ್ಳುವ ಗುರಿಯನ್ನು ಕೇಂದ್ರವು ಹೊಂದಿದೆ. ಏಷ್ಯಾ ಸೊಸೈಟಿ ಇಂಡಿಯಾದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, asiasociety.org/india ಗೆ ಭೇಟಿ ಕೊಡಿ.