ಬಾಲ ಕಾರ್ಮಿಕ ಪದ್ಧತಿ ತಡೆಗೆ ಸರ್ಕಾರದೊಂದಿಗೆ ಕೈ ಜೋಡಿಸಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಕರೆ
Join hands with the government to prevent child labour: Labor Minister Santosh Lad
ಬೆಂಗಳೂರು: ಮಕ್ಕಳು ಕಾರ್ಮಿಕರಾಗಿ ದುಡಿಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಪದ್ಧತಿ ತಡೆಗೆ ಸರ್ಕಾರದೊಂದಿಗೆ ಸಾರ್ವಜನಿಕರೂ ಕೈ ಜೋಡಿಸಿದರೆ ಸಹಾಯವಾಗಲಿದೆ. ಬಾಲಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ನಮ್ಮ ಕಾರ್ಮಿಕ ಇಲಾಖೆ ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಕೂಡ ಕೈ ಜೋಡಿಸಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಕರೆ ನೀಡಿದರು.
ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬಾಲ ಕಾರ್ಮಿಕ ನಿರ್ಮೂಲನ ಯೋಜನಾ ಸೊಸೈಟಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನ ಸೊಸೈಟಿ ನಗರ ಜಿಲ್ಲೆ ವತಿಯಿಂದ ಬೆಂಗಳೂರಿನ ಎಂ ಜಿ ರಸ್ತೆಯ ಗಾಂಧಿ ಪ್ರತಿಮೆಯಿಂದ ಕೆ ಆರ್ ಸರ್ಕಲ್‌ವರೆಗೆ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸಚಿವ ಸಂತೋಷ್ ಲಾಡ್ ರವರು ಮಾತನಾಡಿ ಬಾಲ ಕಾರ್ಮಿಕರ ಪತ್ತೆ ಮತ್ತು ಅವರ ರಕ್ಷಣೆಗೆ ನಮ್ಮ ಇಲಾಖೆ ಸಾಕಷ್ಟು ಕಾರ್ಯಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಾ ಬರುತ್ತಿದೆ. ಮಕ್ಕಳ ಪತ್ತೆಗೆ ದಾಳಿ ಹಾಗೂ ಬಾಲ ಕಾರ್ಮಿಕರನ್ನು ನೇಮಿಸಿಕೊಂಡವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಮಕ್ಕಳಿಂದ ದುಡಿಸಿಕೊಳ್ಳುವುದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರೂ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಮಕ್ಕಳಿಂದ ಒತ್ತಾಯವಾಗಿ ದುಡಿಸಿಕೊಂಡರೆ ಅವರ ಭವಿಷ್ಯ ಕಮರಿ ಹೋಗುತ್ತದೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಬಾಲ ಕಾರ್ಮಿಕರಾಗದಂತೆ ತಡೆಯಲು ನಮ್ಮ ಇಲಾಖೆ ಸದಾ ಬದ್ಧವಾಗಿದೆ. ಕಾರ್ಮಿಕ ಇಲಾಖೆ ಪೊಲೀಸ್ ಸೇರಿದಂತೆ ಇತರ ಇಲಾಖೆಗಳ ಜೊತೆಗೆ ಸೇರಿಕೊಂಡು ಕೆಲಸ ಮಾಡಿದರೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಸಹಾಯವಾಣಿಗೆ ಸಾಕಷ್ಟು ಕರೆಗಳು ಬರುತ್ತಿವೆ. ಆ ಎಲ್ಲಾ ಕರೆಗಳು ಮಕ್ಕಳಿಗೆ ಸಂಬಂಧಿಸದವು ಆಗಿರುವುದಿಲ್ಲ. ಆದ್ದರಿಂದ ಆ ಎಲ್ಲಾ ಕರೆಗಳನ್ನು ಪ್ರತ್ಯೇಕಗೊಳಿಸಬೇಕು. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರಬೇಕು. ಈ ಕರೆಗಳಿಗೆ ಹೇಗೆ ಮತ್ತು ಎಷ್ಟು ಪ್ರತಿಕ್ರಿಯಿಸಲಾಗಿದೆ ಎಂಬುದು ತಿಳಿಯಬೇಕು. ಅಧಿಕಾರಿಗಳು ಈ ಸಂಬಂಧ ಮುತುವರ್ಜಿವಹಿಸಿ ಕೆಲಸ ಮಾಡಬೇಕು ಎಂದರು.
ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುವ ಹಾಗೆಯೇ ಮಕ್ಕಳಿಂದ ಭಿಕ್ಷಾಟನೆ ಸಹ ಅಪಾಯಕಾರಿ. ಮಹಾನಗರಗಳಲ್ಲಿ ಇದು ಇತ್ತೀಚೆಗೆ ಹೆಚ್ಚುತ್ತಿದೆ. ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯದೊಂದಿಗೆ ಈ ಪದ್ಧತಿಯನ್ನು ತಡೆಯಬಹುದಾಗಿದೆ. ಇದಕ್ಕೊಂದು ಕಾರ್ಯಯೋಜನೆ ಸಿದ್ಧಪಡಿಸಬೇಕು. ಆಗಾಗ ಆ ಯೋಜನೆ ಪ್ರಗತಿ ಪರಿಶೀಲನ ಮಾಡಬೇಕು ಎಂದರು.
ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಕೇವಲ ವರ್ಷಕ್ಕೆ ಒಂದು ಬಾರಿ ಕಾರ್ಯಕ್ರಮ ನಡೆದರೆ ಸಾಲದು. ವರ್ಷಪೂರ್ತಿ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು. ಇದೇ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಕುರಿತ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸಿನ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಿಇಒ ಹಾಗೂ ಕಾರ್ಯದರ್ಶಿಗಳಾದ ಶ್ರೀ ಭಾರತಿ ಡಿ, ಕಾರ್ಮಿಕ ಆಯುಕ್ತರಾದ ಡಾ. ಎಚ್ ಎನ್ ಗೋಪಾಲಕೃಷ್ಣ, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್, ಇಎಸ್‌ಐ ನಿರ್ದೇಶಕರಾದ ಡಾ. ವರದರಾಜು, ನಟಿ ರಾಗಿಣಿ ದ್ವಿವೇದಿ, ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿಗಳು, ಶಾಲಾ ಕಾಲೇಜುಗಳ ಸಿಬ್ಬಂದಿ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.