ನಗರದಲ್ಲಿ ಗ್ರೀನ್‌ ಬಿಲ್ಡಿಂಗ್‌ ಕಾಂಗ್ರೆಸ್‌ಗೆ ಚಾಲನೆ: ಸಚಿವ ಈಶ್ವರ ಖಂಡ್ರೆ ಉದ್ಘಾಟನೆ

ನಗರದಲ್ಲಿ ಗ್ರೀನ್‌ ಬಿಲ್ಡಿಂಗ್‌ ಕಾಂಗ್ರೆಸ್‌ಗೆ ಚಾಲನೆ: ಸಚಿವ ಈಶ್ವರ ಖಂಡ್ರೆ ಉದ್ಘಾಟನೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಭಾರತೀಯ ಕೈಗಾರಿಕೆಗಳ ಮಹಾಸಂಘ, ಸಿಐಐ ಆಶ್ರಯದಲ್ಲಿ 22ನೇ ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕಾಂಗ್ರೆಸ್‌ ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡಿತು. ಅರಣ್ಯ, ಇಕಾಲಜಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಈ ಸಮಾವೇಶವನ್ನು ಉದ್ಘಾಟಿಸಿದರು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಶರಣ್‌ ಕುಮಾರ್‌ ಮೋದಿ, ಸಿಐಐ ಅಧ್ಯಕ್ಷರಾದ ಜೆಮ್‌ಷೆಡ್‌ ಎನ್‌. ಗೋದ್ರೆಜ್‌, ಡಬ್ಲ್ಯುಜಿಬಿಸಿಯ ಏಷ್ಯಾ ಪೆಸಿಫಿಕ್‌ ರೀಜನಲ್‌ ನೆಟ್‌ವರ್ಕ್‌ ಅಧ್ಯಕ್ಷ ಜೆಫ್‌ ಓಟ್ಮನ್‌, ಐಜಿಬಿಸಿ ರಾಷ್ಟ್ರೀಯ ಅಧ್ಯಕ್ಷ ಬಿ. ತ್ಯಾಗರಾಜನ್‌, ಉಪಾಧ್ಯಕ್ಷರಾದ ಸಿ. ಶೇಖರ್‌ ರೆಡ್ಡಿ, ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ಎನ್‌. ವೇಣು ಉಪಸ್ಥಿತರಿದ್ದರು. ಉದ್ಯಮ ವಲಯದ ತಜ್ಞರು, ನೀತಿನಿರೂಪಕರು, ವಾಸ್ತುಶಿಲ್ಪಿಗಳು, ಬಿಲ್ಡರ್‌ಗಳು ಮತ್ತು ಸುಸ್ಥಿರ ಪರಿಸರದ ಪ್ರತಿಪಾದಕರು ಈ ಮೂರು ದಿನಗಳ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಕಟ್ಟಡಗಳು ಮತ್ತು ಕಟ್ಟಡ ನಿರ್ಮಾಣ ಪರಿಸರದಲ್ಲಿ ಶೂನ್ಯ ಇಂಗಾಲವನ್ನು ಸಿಐಐ ಐಜಿಬಿಸಿ ಕಾಂಗ್ರೆಸ್‌ ಪ್ರತಿಪಾದಿಸಿದೆ. ಪರಿಸರಸ್ನೇಹಿ ನಿರ್ಮಾಣ ಚಟುವಟಿಕೆಗಳ ಅಗತ್ಯತೆ ಮತ್ತು ಇದಕ್ಕೆ ನೀಡಲಾಗುವ ಸಿಐಐ ಐಜಿಬಿಸಿ ಪ್ರಮಾಣಪತ್ರಗಳ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಲು ಸಮಾವೇಶ ಉದ್ದೇಶಿಸಿದೆ. 

ರಾಜ್ಯ ಸರಕಾರ, ಸಿಐಐ ಐಜಿಬಿಸಿ ಗ್ರೀನ್‌ ಬಿಲ್ಡಿಂಗ್‌ ಕಾಂಗ್ರೆಸ್‌ನ ಪಾಲುದಾರ ಸಂಸ್ಥೆಯಾಗಿದ್ದು, ಈ ಮೂಲಕ ನಿರ್ಮಾಣ ಚಟುವಟಿಕೆಗಳಲ್ಲಿ ಶೂನ್ಯ ತಾಜ್ಯಕ್ಕೆ ಒತ್ತು ನೀಡುತ್ತಿದೆ. ಹವಾಮಾನ ಬದಲಾವಣೆಯ ಕುರಿತು ರಾಜ್ಯ ಸರಕಾರ ಕ್ರಿಯಾಯೋಜನೆ ರೂಪಿಸಿದ್ದು 52,827 ಕೋಟಿ ರೂಪಾಯಿ ವೆಚ್ಚದಲ್ಲಿ ಅರಣ್ಯೀಕರಣ, ಜಲ ನಿರ್ವಹಣೆ ಮತ್ತು ಸಿಎಸ್‌ಆರ್‌ ಮೂಲಕ ಉದ್ಯಮಗಳಿಗೆ ಪ್ರೋತ್ಸಾ ನೀಡಲು ಉದ್ದೇಶಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು “ರಾಜ್ಯ ಸರಕಾರ 1,100ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಪರಿಸರಸ್ನೇಹಿ ಕ್ರಮಗಳನ್ನು ಅಳವಡಿಸಿದೆ. ಈ ಮೂಲಕ ಪರಿಸರಕ್ಕೆ ಪೂರಕವಾದ ನಗರೀಕರಣಕ್ಕೆ ಸರಕಾರ ಒತ್ತು ನೀಡಿದೆ” ಎಂದು ತಿಳಿಸಿದರು.

ಸಿಐಐ ಸೋಹ್ರಾಬ್ಜಿ ಗೋದ್ರೆಜ್‌ ಗ್ರೀನ್‌ ಬಿಸಿನೆಸ್‌ ಸೆಂಟರ್‌ ಅಧ್ಯಕ್ಷರಾದ ಜೆಮ್‌ಷೆಡ್‌ ಎನ್‌. ಗೋದ್ರೆಜ್‌ ಮಾತನಾಡಿ “ಕಟ್ಟಡ ನಿರ್ಮಾಣ ವಲಯ ವಿಶ್ವದ ಇಂಗಾಲದ ಮಾಲಿನ್ಯಕ್ಕೆ ಶೇ 37ರಷ್ಟು ಕಾರಣವಾಗಿದೆ. ಐಜಿಬಿಸಿ ಆರಂಭಿಸಿರುವ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ಕಟ್ಟಡ ನಿರ್ಮಾಣ ವಲಯದ ಪಾಲುದಾರರಲ್ಲಿ ಪರಿಸರಸ್ನೇಹಿ ನಿರ್ಮಾಣ ಚಟುವಟಿಕೆಗಳ ಮಹತ್ವದ ಅರಿವು ಮೂಡಿಸುತ್ತಿದೆ” ಎಂದು ತಿಳಿಸಿದರು.

“ದೇಶದ ನಿರ್ಮಾಣ ಕ್ಷೇತ್ರದಲ್ಲಿ ಪರಿಸರ ಸುಸ್ಥಿರತೆಯನ್ನು ತರಲು ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌, ಐಜಿಪಿಸಿ ಪ್ರಯತ್ನಿಸುತ್ತಿದೆ. 2030ರ ವೇಳೆಗೆ ಭಾರತದ ಹೊಸ ವಾಣಿಜ್ಯ ಮತ್ತು ವಸತಿ ಪ್ರದೇಶ ಪ್ರತಿ ವರ್ಷ 8ರಿಂದ 10 ಬಿಲಿಯನ್‌ ಚದರ ಅಡಿಗಳಷ್ಟು ಹೆಚ್ಚುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಶಕ್ತಿ, ನೀರು, ಇಂಗಾಲ ಮತ್ತು ತಾಜ್ಯದಲ್ಲಿ ಶೂನ್ಯತೆಯನ್ನು ಸಾಧಿಸಲು ಅರಿವು ಮೂಡಿಸಲಾಗುತ್ತಿದೆ” ಎಂದು ಐಜಿಬಿಸಿ ರಾಷ್ಟ್ರೀಯ ಅಧ್ಯಕ್ಷರಾದ ಬಿ. ತ್ಯಾಗರಾಜನ್‌ ಹೇಳಿದರು.

ಐಜಿಬಿಸಿ ಈ ಕ್ರಮಗಳ ಮೂಲಕ ಪ್ರತಿವರ್ಷ 104 ಬಿಲಿಯನ್‌ ಯೂನಿಟ್‌ ವಿದ್ಯುತ್‌, 320 ಬಿಲಿಯನ್‌ ಲೀಟರ್‌ ನೀರುಉಳಿಸುವುದಲ್ಲದೇ 83.2 ಮಿಲಿಯನ್‌ ಟನ್‌ ಇಂಗಾಲವನ್ನು ಕಡಿಮೆ ಮಾಡಲಿದೆ. ಕಡಿಮೆ ವೆಚ್ಚದಲ್ಲಿ ಪರಿಸರಸ್ನೇಹಿ ಕಟ್ಟಡಗಳನ್ನು ನಿರ್ಮಿಸಲು ಐಜಿಬಿಸಿ ಪ್ರೋತ್ಸಾಹ ನೀಡುತ್ತಿದೆ.