ಶ್ರೀನಿವಾಸಪ್ರಸಾದ್ ಅವರ ಮತ್ತು ನಮ್ಮ ನಡುವೆ ಪರಸ್ವರ ಪ್ರೀತಿ, ಗೌರವವಿದೆ: ಡಾ.ಹೆಚ್.ಸಿ.ಮಹದೇವಪ್ಪ
ಮೈಸೂರು: ಪ್ರಜಾಸತ್ತಾತ್ಮಕ ವ್ಯಾಪ್ತಿಯೊಳಗೆ ಶ್ರೀನಿವಾಸಪ್ರಸಾದ್ ಅವರನ್ನು ರಾಜಕೀಯವಾಗಿ ನಾವು ಟೀಕಿಸಿದ್ದರೂ ವ್ಯಕ್ತಿಗತವಾಗಿ ಅಪಾರವಾಗಿ ಗೌರವಿಸುತ್ತೇವೆ. ನಾನು ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಾದಿಯಾಗಿ ಪ್ರಸಾದ್‌ರನ್ನು ಸ್ನೇಹಪೂರ್ವವಾಗಿ ಕಾಣುತ್ತೇವೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ನಗರದ ಜಯಲಕ್ಷ್ಮಿಪುರಂ ನಿವಾಸದಲ್ಲಿ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಗುರುವಾರ ಭೇಟಿ ಕುಶಲೋಪರಿ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜೊತೆಯಲ್ಲೇ ಸಹೋದ್ಯೋಗಿಗಳಾಗಿ ಕೆಲಸ ಮಾಡಿದ್ದೇವೆ. ರಾಜಕೀಯದಲ್ಲಿ ನಾವು ಪರಸ್ಪರ ಎದುರಾಳಿಗಳೇ ವಿನಃ ಶತ್ರುಗಳಲ್ಲ. ನಮ್ಮ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಗೌರವವಿದೆ ಎಂದು ಹೇಳಿದರು.
ಹಿರಿಯ ನಾಯಕರಾದ ಶ್ರೀನಿವಾಸ ಪ್ರಸಾದ್ ಅವರು ಕೆಲುವು ದಿನಗಳ ಹಿಂದೆ ತಮ್ಮ 50 ವರ್ಷಗಳ ಸುದೀರ್ಘವಾದ ಸಾರ್ವಜನಿಕ ಜನಜೀವನಕ್ಕೆ ಹಾಗೂ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದರು. ತಮ್ಮ ರಾಜಕೀಯ ಪಯಣದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಾಗಿ ಅನೇಕ ಏಳು, ಬೀಳುಗಳ ನಡುವೆ ತಾವು ನಂಬಿರುವಂತಹ ಸಿದ್ಧಾಂತದಲ್ಲಿ ಎಂದೂ ರಾಜಿಯಾಗಲಿಲ್ಲ. ಕೆಲವು ಕಾರಣಗಳಿಗೆ ಬೇರೆ ಪಕ್ಷಗಳಿಗೆ ಹೋದರು ಕೂಡ ತಮ್ಮ ಸಿದ್ದಾಂತವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ ಎಂದರು.
ಅವರು ತನ್ನ ವ್ಯಕ್ತಿಗತವಾದ ಸಿದ್ಧಾಂತ ಮತ್ತು ನಾಯಕತ್ವದಲ್ಲಿ ರಾಜಿಯಾಗದೆ ಐದು ದಶಕಗಳ ಕಾಲ ಯಶಸ್ವಿ ರಾಜಕಾರಣವನ್ನು ಪೂರೈಸಿದ್ದಾರೆ. ಅವರು ನಿವೃತ್ತಿ ಘೋಷಿಸಿದ್ದು ನಮಗೆಲ್ಲರಿಗೂ ಬೇಸರದ ಸಂಗತಿ. ಏಕೆಂದರೆ ಇಂದು ರಾಜಕಾರಣಕ್ಕೆ ಕಾಲಿಡುತ್ತಿರುವವರ ಉದ್ದೇಶವೇ ಬೇರೆಯಾಗಿದೆ. ಗುಣಾತ್ಮಕ ನಾಯಕತ್ವ ಮರೆಯಾದರೆ ಪ್ರಜಾಪ್ರಭುತ್ವಕ್ಕೆ ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಾದ್ ಅವರು ಇನ್ನೂ ಹೆಚ್ಚಿನ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕಿತ್ತು ಎಂದು ಆಶಯ ವ್ಯಕ್ತಪಡಿಸಿದರು.
ನಮ್ಮೆಲ್ಲರ ಉದ್ದೇಶ ರಾಜ್ಯದ ಅಭಿವೃದ್ಧಿ, ಸಾರ್ವಜನಿಕರ ಹಿತ ಮತ್ತು ಜನರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯದ ಪ್ರತಿಪಾದನೆ ಹಾಗೂ ಸಂವಿಧಾನದ ಆಶಯಗಳ ಜಾರಿಗೆ ಒತ್ತಾಯ. ಇವೆಲ್ಲವೂ ನಾವು ನಡೆದುಕೊಂಡು ಬಂದಂತಹ ದಾರಿ. ಅದರಲ್ಲಿ ಪ್ರಸಾದ್ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಹೀಗಾಗಿ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ನೀಡಿದ್ದರೂ, ಅವರ ಸೇವೆ ಮತ್ತು ಮಾರ್ಗದರ್ಶನ ರಾಜ್ಯಕ್ಕೆ ಹಾಗೂ ಜನರಿಗೆ ಅತ್ಯಗತ್ಯವಾಗಿದೆ ಎಂದರು.
ಯಾವಾಗಲೂ ಅವರು ತಮ್ಮ ವಿವೇಚನೆ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಯಾವುದೇ ಪಕ್ಷದಲ್ಲಿದ್ದರೂ ಸಂವಿಧಾನದ ಆಶಯಕ್ಕೆ ಭಂಗ ಉಂಟಾದಾಗ, ಜನರ ಹಿತಕ್ಕೆ ಮಾರಕವಾದಂತಹ ನಿರ್ಣಯಗಳಾದಾಗ, ಪ್ರಜಾಪ್ರಭುತ್ವ ವ್ಯವಸ್ಥೆಯು ದುರ್ಬಲಗೊಂಡಾಗ, ಆಡಳಿತರೂಢ ಸರ್ಕಾರವು ಕಾನೂನುಬಾಹಿರ ಚಟುವಟಿಕೆ ನಡೆಸಿದಾಗ ಪ್ರಸಾದ್ ಅವರ ಧ್ವನಿ ಅತ್ಯಂತ ಪ್ರಮುಖವಾದದ್ದು. ಹಾಗೆಯೇ ನಡೆದುಕೊಳ್ಳುತ್ತಾರೆ ಎಂಬ ಬಲವಾದ ನಂಬಿಕೆ ಹಾಗೂ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಶು ಸಂಗೋಪನೆ ಸಚಿವರಾದ ಕೆ.ವೆಂಕಟೇಶ್, ಶಾಸಕ ಗಣೇಶ್ ಪ್ರಸಾದ್, ಯುವ ಮುಖಂಡರಾದ ಡಾ.ಯತಿಂದ್ರ ಸಿದ್ದರಾಮಯ್ಯ, ಮೈಸೂರು-ಕೊಡಗು ಲೋಕಸಭಾ ಆಕಾಂಕ್ಷಿ ಎಂ.ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿದಂತೆ ಮುಂತಾದ ಮುಖಂಡರು ಇದ್ದರು.