ಗುರುಗಳ ಗುಲಾಮರಾಗುವ ತನಕ ಸರ್ಕಾರಕ್ಕಿಲ್ಲ ಮುಕ್ತಿ - ಮುಖ್ಯಮಂತ್ರಿ ಚಂದ್ರು
ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದವರು ತಮ್ಮ ಅನೇಕ ಬೇಡಿಕೆಗಳಿಗಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಅಧಿಕಾರಿಗಳ ಮಾತುಗಳನ್ನು ಕೇಳುವುದನ್ನು ಬಿಟ್ಟು ಪ್ರಾಥಮಿಕ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಪ್ರಾಥಮಿಕ ಶಿಕ್ಷಕರು ದೇಶದಲ್ಲಿನ ಮಕ್ಕಳಿಗೆ ಪ್ರಾಥಮಿಕ ಅರಿವನ್ನು ಉಂಟು ಮಾಡಿ ಅವರುಗಳನ್ನು ದೇಶದ ಸಭ್ಯ ನಾಗರೀಕರುಗಳನ್ನಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಇಂತಹ ಶಿಕ್ಷಕ ಸಮುದಾಯಗಳಿಗೆ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರಗಳು ಮುಂಬಡ್ತಿಗಳನ್ನು ನೀಡದೆ ಶೋಷಣೆಯನ್ನು ಮಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡಲೇ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಶಿಕ್ಷಕರ ಎಲ್ಲ ಬೇಡಿಕೆಗಳಿಗೆ ಸರ್ಕಾರದಿಂದ ಸಮ್ಮತಿ ಇದೆ ಎಂಬುದನ್ನು ತಿಳಿಸಬೇಕೆಂದು ಆಗ್ರಹಿಸಿದರು.
ಸರ್ಕಾರವು ಎಂದಿಗೂ ಗುರುಗಳ ಗುಲಾಮರಾಗದ ತನಕ ಮುಕ್ತಿ ಸಿಗುವುದಿಲ್ಲ, ದೆಹಲಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ನಡೆಸುತ್ತಿರುವ ಶಿಕ್ಷಣ ಕ್ರಾಂತಿಯ ಬಗ್ಗೆ ರಾಜ್ಯ ಸರ್ಕಾರವು ಸಹ ತಿಳಿದುಕೊಂಡು ಅದೇ ನಿಟ್ಟಿನಲ್ಲಿ ಮುಂದುವರಿಯಬೇಕು. ಕೇವಲ ಕಟ್ಟಡಗಳನ್ನು ಕಟ್ಟಿದರೆ ಸಾಲದು , ಮಕ್ಕಳಿಗೆ ಅರಿವು ಮೂಡಿಸುವ ಶಿಕ್ಷಕರಿಗೆ ಸಕಲ ಸವಲತ್ತು ಹಾಗೂ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮುಂದಾಗ ಬೇಕೆಂದು ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಆಗ್ರಹಿಸಿದರು.