ಜಾತಿ ಗಣತಿ ವರದಿ ಬಿಡುಗಡೆಗೆ ಸ್ವಾಗತ: ದಕ್ಷಿಣ ಭಾರತ ರಾಜ್ಯಗಳ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ನಿರ್ಣಯ
ಬೆಂಗಳೂರು : ದಕ್ಷಿಣ ಭಾರತ ರಾಜ್ಯಗಳ ಹಿಂದುಳಿದ ವರ್ಗಗಳ ಸಮಾವೇಶವನ್ನು , "ಒಬಿಸಿ ಫೆಡರೇಶನ್ ಆಫ್ ಇಂಡಿಯಾ"ವತಿಯಿಂದ ಬೆಂಗಳೂರಿನಲ್ಲಿಂದು ಆಯೋಜಿಸಲಾಗಿತ್ತು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್, ಸಮರ್ಥನಂ ಟ್ರಸ್ಟ್ ನ ಮಹಾಂತೇಶ್, ಮೀಸಲಾತಿ ಕುರಿತು ಮಹತ್ವದ ವರದಿ ನೀಡಿದ ಮಂಡಲ ಆಯೋಗದ ಮುಖ್ಯಸ್ಥರ ಮೊಮ್ಮಗ ಡಾ. ಸೂರಜ್ ಮಂಡಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯ ಸ್ಥಿತಿಗತಿ ಬಗ್ಗೆ ಚಿಂತನ-ಮಂಥನ ನಡೆಯಿತು.
ದಿ. ಮಾಜಿ ಪ್ರಧಾನಿ ವಿ ಪಿ ಸಿಂಗ್ ಅವಧಿಯಲ್ಲಿ ಜಾರಿಗೆ ಬಂದ ಮಂಡಲ್ ವರದಿಯ ಪರಿಣಾಮ, ದಿ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಪ್ರಾತಿನಿಧ್ಯ ವಂಚಿತ ಹಿಂದುಳಿದ ವರ್ಗಗಳ ಮುಂದಿನ ಸವಾಲುಗಳು ಸೇರಿದಂತೆ ಹಲವು ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಓಬಿಸಿ ಫೆಡರೇಶನ್ ಅಧ್ಯಕ್ಷ ಜೆ ಎಂಜೇರಪ್ಪ, ಶೇಕಡಾ 57ರಷ್ಟೀರುವ ಹಿಂದುಳಿದ ವರ್ಗಗಳ ಜನರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಸ್ವೀಕರಿಸುವುದನ್ನು ಓಬಿಸಿ ಫೆಡರೇಶನ್ ಸ್ವಾಗತಿಸುತ್ತದೆ ಎಂದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್ ಹಿಂದುಳಿದ ವರ್ಗಗಳ ಸಮಾಜ ದೊಡ್ಡ ಸಂಖ್ಯೆಯಲ್ಲಿ ಇದ್ದರೂ ಅದಕ್ಕೆ ತಕ್ಕ ಅವಕಾಶ ಸಿಗದಿರುವುದು ವಿಷಾದನೀಯ, ಕಾಂತರಾಜ್ ಆಯೋಗ ವರದಿಯಲ್ಲಿ ಯಾವುದೇ ಒಕ್ಕಲಿಗ ಸೇರಿದಂತೆ ಯಾವುದೇ ಜಾತಿಯನ್ನು ಕಡೆಗಣಿಸುವ ಅಂಶಗಳಿಲ್ಲ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಇದರಲ್ಲಿ ಗುರುತಿಸಲಾಗಿದೆ, ಒಕ್ಕಲಿಗ ಸಮುದಾಯ ಇದನ್ನು ವಿರೋದಿಸುವದಾದರೆ ಆರ್ಥಿಕವಾಗಿ ಹಿಂದುಳಿದ ಒಕ್ಕಲಿಗರನ್ನು ತುಳಿದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಮಾಜಿ ಉಪ ಮೇಯರ್ ಹರೀಶ್, ಒಬಿಸಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಜೆ ಎಂಜೇರಪ್ಪ ಮತ್ತಿತರರ ಗಣ್ಯರು ಭಾಗವಹಿಸಿದ್ದರು.