ಪದ್ಮಶ್ರೀ ತುಳಸಿಗೌಡ ವನ ಉದ್ಘಾಟಿಸಿದ ಈಶ್ವರ ಖಂಡ್ರೆ
Padma Shri Tulsi Gowda vana inaugurated by Eshwara Khandre
ಹಿಡಕಲ್: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ವೃಕ್ಷ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಹಿಂಡಲಗ ಜಲಾಶಯದ ಬಳಿ ದಿ.ಉಮೇಶ್ ವಿಶ್ವನಾಥ ಕತ್ತಿ ಚಿಟ್ಟೆ ಉದ್ಯಾನ ಮತ್ತು ಪರಿಸರ ಪ್ರೇಮಿ ಪದ್ಮಶ್ರೀ ತುಳಸಿಗೌಡ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಪಠ್ಯ ಪುಸ್ತಕದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ, ವೃಕ್ಷ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪಠ್ಯಗಳನ್ನು ಸೇರಿಸಬೇಕು ಎಂದು ಸಲಹೆ ಮಾಡಿದರು.
ಹಿಡಕಲ್ ಜಲಾಶಯದ ಬಳಿ ಸುಮಾರು 500 ಎಕರೆ ಪ್ರದೇಶದಲ್ಲಿ ವಿವಿಧ ಉದ್ಯಾನವನಗಳ ನಿರ್ಮಾಣವಾಗುತ್ತಿದ್ದು, ಇಲ್ಲಿ ಮೊಸಳೆ ಪಾರ್ಕ್, ಬಿದಿರು ಉದ್ಯಾನ ಮತ್ತು ಪಕ್ಷಿಧಾಮ ನಿರ್ಮಿಸುವ ಯೋಜನೆಯಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ಅವರಿಗೆ ಪರಿಸರ ಪ್ರಕೃತಿಯ ಬಗ್ಗೆ ಕಾಳಜಿ ಇತ್ತು ಹೀಗಾಗಿಯೇ ಎಷ್ಟು ಬೃಹತ್ ಪ್ರದೇಶದಲ್ಲಿ ಹಸಿರು ಹೊದಿಕೆ ಹೆಚ್ಚಳಕ್ಕೆ ಯೋಜನೆ ರೂಪಿಸಿದ್ದಾರೆ, ಅವರ ಕನಸನ್ನ ನನಸು ಮಾಡುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎಂದರು.
ಹಿಡಕಲ್ ಜಲಾಶಯದ ಬಳಿಯ ಈ ಉದ್ಯಾನವನ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದ ಸಮೀಪ ಇರುವ ಬೃಂದಾವನ ಉದ್ಯಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಇಂದು ಜಾಗತಿಕ ಸವಾಲಾಗಿ ಪರಿಣಮಿಸಿರುವ ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆಯೊಂದೇ ಮಾರ್ಗವಾಗಿದ್ದು ಈ ನಿಟ್ಟಿನಲ್ಲಿ ತಾವು ಸಚಿವರಾದ ಬಳಿಕ ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಿ, ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದರು.
ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧಿವೇಶನಕ್ಕಾಗಿ ಬೆಳಗಾವಿಗೆ ಭೇಟಿ ನೀಡಿದ ಶತಮಾನೋತ್ಸವದ ಅಂಗವಾಗಿ ರಾಜ್ಯದಲ್ಲಿ ಹೆಚ್ಚುವರಿಯಾಗಿ ಒಂದು ಕೋಟಿ ವೃಕ್ಷ ನೀಡಲು ಸಂಕಲ್ಪ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ತುಳಸಿಗೌಡ ಉದ್ಯಾನ ಉದ್ಘಾಟನೆ:
ಇದೇ ಸಂದರ್ಭದಲ್ಲಿ ದಿವಂಗತ ಉಮೇಶ್ ಕತ್ತಿ ಅವರ ಪುತ್ಥಳಿಯನ್ನು ಈಶ್ವರ ಖಂಡ್ರೆ ಅನಾವರಣ ಮಾಡಿದರು ಮತ್ತು ನಿನ್ನೆ ನಿಧನ ಹೊಂದಿದ ಪರಿಸರ ಪ್ರೇಮಿ ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ಅವರ ಸ್ಮರಣಾರ್ಥ ನಿರ್ಮಿಸಿರುವ ಉದ್ಯಾನವನವನ್ನೂ ಉದ್ಘಾಟಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ನಿಖಿಲ್ ಕತ್ತಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್, ಹಿರಿಯ ಅರಣ್ಯ ಅಧಿಕಾರಿಗಳಾದ ಕುಮಾರ್ ಪುಷ್ಕರ್ ಬ್ರಿಜೇಶ್ ಕುಮಾರ್, ಮಂಜುನಾಥ್ ಚೌಹಾಣ್ ಮಾತ್ತಿತರರು ಪಾಲ್ಗೊಂಡಿದ್ದರು.