ಪರಿಹಾರದ ಭರವಸೆಯೊಂದಿಗೆ ಬರುವ ಜನರಿಗೆ ನಿರಾಸೆ ಮೂಡಿಸಬೇಡಿ: ಸಚಿವ ಸಂತೋಷ ಲಾಡ್‌

Don't disappoint people who come with promises of relief: Minister Santhosh Lad

ಪರಿಹಾರದ ಭರವಸೆಯೊಂದಿಗೆ ಬರುವ ಜನರಿಗೆ ನಿರಾಸೆ ಮೂಡಿಸಬೇಡಿ: ಸಚಿವ ಸಂತೋಷ ಲಾಡ್‌
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಧಾರವಾಡ: ಜನತಾದರ್ಶನಕ್ಕೆ ಪರಿಹಾರದ ಭರವಸೆಯೊಂದಿಗೆ ಸಾರ್ವಜನಿಕರು ಬಂದಿರುತ್ತಾರೆ. ಅವರಿಗೆ ನಿರಾಸೆ ಮೂಡಿಸದೆ ಸಾಧ್ಯವಾದಷ್ಟು ಸ್ಥಳದಲ್ಲಿ ಅವರ ಸಮಸ್ಯೆ ಪರಿಹರಿಸಬೇಕು. ಅಗತ್ಯವಿದ್ದಲ್ಲಿ ಸರಕಾರಕ್ಕೆ ಶಿಫಾರಸ್ಸು ಮಾಡಲು ಕ್ರಮವಹಿಸಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು. 

ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 8ನೇ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. 


ಪ್ರತಿ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಕಳಕಳಿ, ಕಾಳಜಿ ಮತ್ತು ಮಾನವೀಯತೆಯಿಂದ ಸಮಸ್ಯೆಗಳನ್ನು, ಅಹವಾಲುಗಳನ್ನು ಆಲಿಸಿದರೆ, ಅರ್ಧ ಪರಿಹಾರ ಸಿಕ್ಕಷ್ಟು ಅವರು ಖುಷಿಯಾಗುತ್ತಾರೆ. ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸಂವಹನ ಮಾಡಿ ಜನಸ್ನೇಹಿ ಆಡಳಿತ ನೀಡಬೇಕು. ಸರಕಾರದ ಯೋಜನೆ, ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಹೇಳಿದರು. 

 *ಐದು ಗಂಟೆಗಳಿಗೂ ಹೆಚ್ಚು ಕಾಲ ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವರು* 
 ಬೆಳಗ್ಗೆ 11.40 ರಿಂದ ಸಂಜೆ 4. 45 ಗಂಟೆವರೆಗೆ ನಿರಂತರವಾಗಿ ಐದು ಗಂಟೆಗಳಿಗೂ ಹೆಚ್ಚು ಕಾಲ ಸಾರ್ವಜನಿಕರ ಸಮಸ್ಯೆಗಳನ್ನು ಪೂರ್ಣವಾಗಿ ಆಲಿಸಿ, ಪರಿಹಾರದ ಭರವಸೆಯನ್ನು ಸಚಿವರು ನೀಡಿದರು. ಜನತಾ ದರ್ಶನ ಮುಗಿಯುವರೆಗೆ ಸುಮಾರು 5 ಗಂಟೆಗೂ ಹೆಚ್ಚು ಕಾಲ ಸಚಿವರು ನಿಂತುಕೊಂಡೆ ಜನರ ಸಮಸ್ಯೆ ಆಲಿಸಿದ್ದು ಎಲ್ಲರ ಗಮನ ಸೆಳೆಯಿತು. 

ಸೆಪ್ಟೆಂಬರ್‌ 25, 2023 ರಿಂದ ಜನವರಿ 27, 2025 ರ 14 ತಿಂಗಳ ಅವಧಿಯಲ್ಲಿ ಜಿಲ್ಲಾ ಮಟ್ಟದ ಎಂಟು ಜನತಾ ದರ್ಶನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಜನತಾ ದರ್ಶನ ಆಯೋಜಿಸಿದ ಏಕೈಕ ಸಚಿವರಾಗಿದ್ದಾರೆ. 

ಸಭೆಯುದ್ದಕ್ಕೂ ಸಹನೆಯಿಂದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಸಚಿವರು, ತಪ್ಪು ಕಂಡು ಬಂದಲ್ಲಿ ಅಧಿಕಾರಿಗಳಿಗೆ ಗದರಿಸಿ, ಸರಿಯಾಗಿ ಸಾರ್ವಜನಿಕರ ಸೇವೆ ಮಾಡುವಂತೆ ಎಚ್ಚರಿಸಿದರು. ತಪ್ಪು ಮಾಹಿತಿ ನೀಡಲು ಪ್ರಯತ್ನಿಸುವ ಹಾಗೂ ಅಧಿಕಾರಿಗಳ ಮೇಲೆ ವಿನಾಕಾರಣ ದೂರು ಹೇಳುವವರೆಗೂ ಸಿಟ್ಟಿನಿಂದ ಸಚಿವರು ಬಿಸಿ ಮುಟ್ಟಿಸುತ್ತಾರೆ. ಜನತಾದರ್ಶನಕ್ಕೆ ತಮ್ಮ ಸಮಸ್ಯೆ ಹೊತ್ತು ಬರುವ ಪ್ರತಿಯೊಬ್ಬರನ್ನು ಸಹನೆಯಿಂದ ವಿಚಾರಿಸಿ, ಸರಕಾರದ ಸಹಾಯದೊಂದಿಗೆ, ಅಗತ್ಯವಿದ್ದಲ್ಲಿ ವೈಯಕ್ತಿಕ ನೆರವು ನೀಡುತ್ತಾರೆ. ಅಹವಾಲು ನೀಡಿದವರು ಪರಿಹಾರದ ಭರವಸೆಯೊಂದಿಗೆ ಮನೆಗೆ ಮರಳುತ್ತಾರೆ. 

ಜನತಾದರ್ಶನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 61, ಮಹಾನಗರ ಪಾಲಿಕೆಗೆ ಸಂಬಂಧಿಸಿದ 33, ಜಿಲ್ಲಾ ಪಂಚಾಯತ ಸಂಬಂಧಿಸಿದ 16 ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ 88 ಅರ್ಜಿಗಳು ಸೇರಿ ಒಟ್ಟು 200 ಅರ್ಜಿಗಳನ್ನು ಸ್ವೀಕರಿಸಲಾಯಿತು. ಪ್ರತಿ ಅರ್ಜಿ ಪರಿಶೀಲಿಸಿ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸಚಿವರು ನಿರ್ದೇಶಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಮಹಾನಗರ ಪಾಲಿಕೆ ಆಯುಕ್ತ ರುದ್ದೇಶ ಗಾಳಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.


ಜನತಾ ದರ್ಶನದ ನಂತರ ರೇಷ್ಮೆ ಮತ್ತು ಕಾರ್ಮಿಕ ಇಲಾಖೆಯಿಂದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯಡಿ ಸ್ವಉದ್ಯೋಗಕ್ಕಾಗಿ ಉಪಕರಣಗಳನ್ನು ಸಚಿವ ಸಂತೋಷ ಲಾಡ್ ಅವರು ವಿತರಿಸಿದರು.