ಜನರ ಅಶೀರ್ವಾದ ಇರುವವರೆಗೆ ಯಾವುದೇ ಜೀವ ಬೆದರಿಕೆಗಳಿಗೆ ಅಂಜುವುದಿಲ್ಲ - ಸಚಿವ ಪ್ರಿಯಾಂಕ್ ಖರ್ಗೆ

ಜನರ ಅಶೀರ್ವಾದ ಇರುವವರೆಗೆ ಯಾವುದೇ ಜೀವ ಬೆದರಿಕೆಗಳಿಗೆ ಅಂಜುವುದಿಲ್ಲ - ಸಚಿವ ಪ್ರಿಯಾಂಕ್ ಖರ್ಗೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ನನಗೆ ಎಷ್ಟೇ ಜೀವಬೆದರಿಕೆಗಳು ಬರಲಿ, ಎದುರಿಸುತ್ತೇನೆ. ಜನರ ಆಶೀರ್ವಾದ ಇರುವವರೆಗೆ ಯಾವುದೇ ಜೀವ ಬೆದರಿಕೆಗಳಿಗೆ ಅಂಜುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರದ ರಿಂಗ್ ರಸ್ತೆಯ ಮೊಘಲ್ ಗಾರ್ಡನ್ ನಲ್ಲಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದ ಸ್ವಾತಂತ್ರ್ಯ ಹಿನ್ನಲೆ ಹಾಗೂ ಮಹಮ್ಮದ ಇಕ್ಬಾಲ್ ಬರೆದ ಹಾಗೂ ರವಿಶಂಕರ್ ಹಾಡಿದ 'ಸಾರೇ ಜಹಾಂಸೆ ಅಚ್ಛಾ ಹಿಂದೂಸ್ಥಾನ ಹಮಾರಾ' ಕವಿತೆ ಹುಟ್ಟಿದ ಸಂದರ್ಭದ ಬಗ್ಗೆ ವಿವರಿಸಿ ಮಾತನಾಡಿದ ಸಚಿವರು ಕವಿತೆಯ ಆಶಯದಂತೆ ನಾವೆಲ್ಲ ಒಂದೇ ಎನ್ನುವುದು ಕಾಂಗ್ರೆಸ್ ಪಕ್ಷದ ತತ್ವವಾಗಿದೆ. ಆದರೆ ಬಿಜೆಪಿಯ ತತ್ವ ಭಿನ್ನವಾಗಿದೆ. ಅದು ಧರ್ಮಗಳನ್ನು ವಿಭಾಗಿಸುವ ಕೆಲಸ ಮಾಡುತ್ತದೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಉಪಯೋಗದ ಕುರಿತು ಮಾತನಾಡಿದ ಖರ್ಗೆ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಂದ ರಾಜ್ಯದ ಜನರಿಗೆ ಅನುಕೂಲವಾಗಿದೆ. ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಎಲ್ಲಾ ಯೋಜನೆಗಳನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ. ಅವರನ್ನು ನೀವು ಅಧಿಕಾರಕ್ಕೆ ತರುತ್ತೀರಾ ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಗ್ಯಾರಂಟಿಗಳು ರೀಲ್, ಮೋದಿ ಗ್ಯಾರಂಟಿಗಳು ರಿಯಲ್ ಎನ್ನುವ ಸಂಸದ ಉಮೇಶ ಜಾಧವ್ ಅವರಿಗೆ ತರಾಟೆಗೆ ತೆಗೆದುಕೊಂಡ ಖರ್ಗೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆವು ಇದು ರಿಯಲ್. ಆದರೆ, ನೀವು ಅಧಿಕಾರಕ್ಕೆ ಬಂದರೆ  ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದೀರಿ ಅದು ರೀಲ್. ಯಾಕೆಂದರೆ ರೈತರ ಆದಾಯ ದ್ವಿಗುಣ ಮಾಡಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು ರೀಲ್ ಯಾಕೆಂದರೆ ಉದ್ಯೋಗ ಸೃಷ್ಟಿಸಲಿಲ್ಲ. ಆದರೆ, ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಿದ್ದೇವೆ ಅದು ರಿಯಲ್ . ಮೊಸರು ಖರೀದಿ ಮಾಡುವುದರಿಂದ ಹಿಡಿದು ಯಾವುದೇ ವಸ್ತು ತೆಗೆದುಕೊಂಡರೆ ಅದಕ್ಕೆ ಟ್ಯಾಕ್ಸ್ ಕಟ್ಟಲೇಬೇಕು. ಜನರು ಉಸಿರಾಡಲು ಮಾತ್ರ ಮೋದಿ ಟ್ಯಾಕ್ಸ್ ಹಾಕಿಲ್ಲ ಅದನ್ನು ಬಿಟ್ಟರೆ ಮಿಕ್ಕೆಲ್ಲವಕ್ಕೂ ಟ್ಯಾಕ್ಸ್ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಲೀಡ್ ಕೊಟ್ಟಿದ್ದೀರಿ.ಈ ಸಲವೂ ಕೂಡಾ ಕನಿಷ್ಠ ಶೇ.90ರಷ್ಟು ಮತದಾನ ಮಾಡುವ ಮೂಲಕ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಅಜಯ್ ಸಿಂಗ್ ಮಾತನಾಡಿ ಈ ಸಲದ ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿದೆ. ಇಲ್ಲಿ ರಾಧಾಕೃಷ್ಣ ಅವರು ಅಭ್ಯರ್ಥಿಯಾಗಿದ್ದರೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ನಡುವಿನ ಚುನಾವಣೆ ಯಾಗಿದೆ ಎಂದರು.

ಕೇಂದ್ರದ ಮೋದಿ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಲು ವಿಫಲವಾಗಿದೆ. ಕೇವಲ ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಅವರನ್ನು ವಿಭಾಗಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ಚುನಾವಣೆ ಎದುರಿಸುವ ತಂತ್ರ ಅನುಸರಿಸಲಾಗುತ್ತಿದೆ. ಆದರೆ ಈ ಸಲ ಹಾಗಾಗಲು ಬಿಡಬಾರದು. ಉತ್ತರ ಕ್ಷೇತ್ರದಿಂದ ಕನಿಷ್ಢ 40,000 ಮತಗಳ ಲೀಡ್ ಕೊಡಬೇಕು ಎಂದು ಮನವಿ ಮಾಡಿದರು.

ಖಾಜಾ ಬಂದೇನವಾಜ್ ದರ್ಗಾದ ಸಾಬೇಬ್, ಡಾ ಮುಸ್ತಫಾ ಬಾಬಾ ಮಾತನಾಡಿ, ತಳಮಟ್ಟದಲ್ಲಿ ರಾಧಾಕೃಷ್ಣ ಅವರು ಕೆಲಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.  ಶಾಸಕಿ ಕನೀಜ್ ಫಾತೀಮಾ ಅವರ ಮಾರ್ಗದರ್ಶನದಂತೆ ಎಲ್ಲರೂ ಕೆಲಸ ಮಾಡಿ ರಾಧಾಕೃಷ್ಣ ಅವರನ್ನು ಗೆಲ್ಲಿಸಬೇಕು ಎಂದರು.

ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಈ ಚುನಾವಣೆ ಸಂವಿಧಾನವನ್ನು ರಕ್ಷಿಸುವ ಚುನಾವಣೆಯಾಗಿದೆ. ಕಳೆದ 10 ವರ್ಷದ ದುರಾಡಳಿತವನ್ನು ಜನರು ಅನುಭವಿಸಿದ್ದಾರೆ. ಮೋದಿಯನ್ನು ಗಾಂಧಿ ಕುಟುಂಬದ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ ಎದುರಿಸಬಲ್ಲರು. ಈ ಸಲ ಮತ್ತೆ ಮೋದಿ ಪ್ರಧಾನಿಯಾದರೆ ಸಂವಿಧಾನದ ಆಶಯಗಳಿಗೆ ಧಕ್ಕೆ ಬರಲಿದೆ. ಅದಕ್ಕಾಗಿ, ಬಿಜೆಪಿಯನ್ನು ಸೋಲಿಸಿ ಎಂದರು.

ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಉತ್ತರ ಶಾಸಕಿ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಮಜಹರ್ ಖಾನ್, ಶರಣು ಮೋದಿ ಸೇರಿದಂತೆ ಹಲವರಿದ್ದರು