ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ: ತೇಜಸ್ವಿಸೂರ್ಯನನ್ನು ಸೋಲಿಸಿ ಸೌಮ್ಯರೆಡ್ಡಿಗೆ ನ್ಯಾಯ ಕೊಡಿ: ಸಿದ್ದರಾಮಯ್ಯ ಮನವಿ

ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ: ತೇಜಸ್ವಿಸೂರ್ಯನನ್ನು ಸೋಲಿಸಿ ಸೌಮ್ಯರೆಡ್ಡಿಗೆ ನ್ಯಾಯ ಕೊಡಿ: ಸಿದ್ದರಾಮಯ್ಯ ಮನವಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಮಲಿಂಗ ರೆಡ್ಡಿ, ಸೌಮ್ಯ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ನಾವು ಬರೀ ಭಾವನಾತ್ಮಕವಾಗಿ ನಿಮ್ಮನ್ನು ಕೆರಳಿಸಿ ವಂಚಿಸಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ದೇಶ ಉಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. 

 ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು, ಆರು ಕಿಲೋಮೀಟರ್ ರೋಡ್ ಶೋ ನಡೆಸಿ ಮತಯಾಚಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಸಂಸದರಾಗಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಮೋದಿ ಮುಖ ತೋರಿಸಿ ಓಟು ಕೇಳುವ ದುರ್ಗತಿ ಬಿಜೆಪಿಗೆ ಬಂದಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುವ ಮುಖ ಇಲ್ಲ. ಏಕೆಂದರೆ ಇವರು ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರಿಗೆ ಕೊಟ್ಟ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಕಪ್ಪುಹಣ ವಾಪಾಸ್ ತರಲಿಲ್ಲ. ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ ಮೋದಿ ರೈತರ ಖರ್ಚು ಹೆಚ್ಚಾಗುವಂತೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳುಗಳ ಬೆಲೆ ಇಳಿಸಲಿಲ್ಲ. ಮತ್ತೆ ಅದೇ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಘನತೆ ಬರುತ್ತದಾ ಎಂದು ಪ್ರಶ್ನಿಸಿದರು.‌

ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ ತೇಜಸ್ವಿಸೂರ್ಯನನ್ನು ಸೋಲಿಸಿ ಸೌಮ್ಯರೆಡ್ಡಿಗೆ ನ್ಯಾಯ ಕೊಡಿ, ಸೌಮ್ಯರೆಡ್ಡಿ ಗೆದ್ದರೆ ನಾನು ಗೆದ್ದಂತೆ. ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ. ಬರೀ ಭಾವನಾತ್ಮಕವಾಗಿ ಕೆರಳಿ ಮತ ಹಾಕಿದ್ದಕ್ಕೆ ಹತ್ತು ವರ್ಷದಲ್ಲಿ ದೇಶಕ್ಕೆ, ನಿಮಗೆ ಸಿಕ್ಕಿದ್ದೇನು ಎಂದು ಪ್ರಶ್ನಿಸಿ ಸೌಮ್ಯರೆಡ್ಡಿಯವರನ್ನು ಗೆಲ್ಲಿಸಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರಿದರು.

ಈ ಬಾರಿ ಸಂಸದ ತೇಜಸ್ವಿ ಸೂರ್ಯನಿಗೆ ಸೋಲಾಗುತ್ತದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಭಯಾನಕ ಬಿಜೆಪಿ ವಿರೋಧಿ ಅಲೆ ಇದೆ. ಸೌಮ್ಯರೆಡ್ಡಿ ಭಾರೀ ಅಂತರದಲ್ಲಿ ಗೆಲ್ಲುತ್ತಾರೆ. ಈ ಮಾತನ್ನು ನಾನು ಸುಮ್ಮನೆ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.