ಭವಿಷ್ಯದ ಕರ್ನಾಟಕದಲ್ಲಿ ನೀರಿನ ಸುರಕ್ಷತೆಗೆ ರಾಜ್ಯ ಸರ್ಕಾರ ಬದ್ದ : ಸಚಿವ ಪ್ರಿಯಾಂಕ್‌ ಖರ್ಗೆ

State government committed to water security in future: Minister Priyank Kharge

ಭವಿಷ್ಯದ ಕರ್ನಾಟಕದಲ್ಲಿ ನೀರಿನ ಸುರಕ್ಷತೆಗೆ ರಾಜ್ಯ ಸರ್ಕಾರ ಬದ್ದ : ಸಚಿವ ಪ್ರಿಯಾಂಕ್‌ ಖರ್ಗೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು : ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ಸುಧಾರಿತ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ( ಐಟಿ ಮತ್ತು ಬಿಟಿ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಯೋಗದೊಂದಿಗೆ ಆಯೋಜಿಸಿರುವ ಕರ್ನಾಟಕ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆಯ ಶೃಂಗಸಭೆಗೆ ಮಂಗಳವಾರ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಇಂದು ಸುದ್ದಿಗಾರರಿಗೆ ತಿಳಿಸಿದರು. 

ಭವಿಷ್ಯದ ಗ್ರಾಮೀಣ ಕರ್ನಾಟಕದಲ್ಲಿ ‘ನೀರಿನ ಸುರಕ್ಷತೆಗಾಗಿ ನವೀನ ತಂತ್ರಜ್ಞಾನಗಳ ಬಳಕೆ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಈ ಶೃಂಗಸಭೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಂರಕ್ಷಣೆ ಮತ್ತು ಸಮರ್ಥನೀಯ ನಿರ್ವಹಣೆ, ಸುಧಾರಿತ ನೀರಿನ ಗುಣಮಟ್ಟಕ್ಕಾಗಿ ಸುಧಾರಿತ ತಂತ್ರಜ್ಞಾನಗಳ ಕುರಿತು ಸಮಗ್ರ ಚರ್ಚೆಗೆ ವೇದಿಕೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ನವ ಗ್ರಾಮೀಣ ಕರ್ನಾಟಕ ರೂಪಿಸಲು ಕರ್ನಾಟಕ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆಯ ಶೃಂಗಸಭೆ ಮಹತ್ವದ ಹೆಜ್ಜೆ ಎಂದೇ ಹೇಳಬಹುದು. ಇದು ನವೋದ್ಯಮಿಗಳು, ವಿಷಯ ತಜ್ಞರು, ಸಂಶೋಧಕರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯಕ್ಕೆ ಸೂಕ್ತ ವೇದಿಕೆಯಾಗಿದೆ. ಜಾಗತಿಕ ಮಟ್ಟದ ತಜ್ಞರು ಇಲ್ಲಿ ಭಾಗವಹಿಸುವುದರಿಂದ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ವಿನೂತನ ಪರಿಹಾರ ಕ್ರಮಗಳು ದೊರೆಯಲಿವೆ ಎಂಬ ಅಚಲ‌ವಿಶ್ವಾಸ ನಮ್ಮದು. ಈ ಶೃಂಗಸಭೆ ‌ಕೇವಲ‌ ಸುಧಾರಿತ ತಾಂತ್ರಿಕ‌ ಪರಿಹಾರ ಕ್ರಮಗಳನ್ನು ‌ಕಂಡುಕೊಳ್ಳುವುದಕ್ಕೆ ಸೀಮಿತಗೊಳ್ಳದೆ ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟ ಸುಧಾರಣೆಗೂ ನೆರವಾಗುತ್ತದೆ. ಪ್ರತಿ ‌ಪ್ರಜೆಗೂ ಶುದ್ಧ ನೀರು, ನೈರ್ಮಲ್ಯ ವಾತಾವರಣ ಕಲ್ಪಿಸುವ ಗುರಿ ನಮ್ಮದು ಎಂದೂ ಸಚಿವರು ಪ್ರಕಟಿಸಿದರು.

 ಈ ಶೃಂಗಸಭೆ ಯಲ್ಲಿ ಭಾಗವಹಿಸಲು ಒಟ್ಟು 119 ಅರ್ಜಿಗಳು ಬಂದಿದ್ದು, ಅದರಲ್ಲಿ ಅತ್ಯುತ್ತಮವಾದ 20 ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಶೃಂಗಸಭೆಯು ಈ ಆಯ್ದ ಸ್ಟಾರ್ಟ್-ಅಪ್‌ಗಳ ಪಿಚಿಂಗ್ ಸೆಶನ್ ಇರಲಿದೆ. ಇದರಲ್ಲಿ ಅವರು ತಮ್ಮ ಪರಿಹಾರಗಳನ್ನು ಪ್ರಸ್ತುತಪಡಿಸಬಹುದು. ವಿಜೇತರಿಗೆ ಕನಿಷ್ಠ ₹ 25 ಲಕ್ಷ ಧನಸಹಾಯವನ್ನು ಖಾತರಿಪಡಿಸಲಾಗಿದೆ. ಇಲಾಖೆಯ ಸಹಯೋಗದೊಂದಿಗೆ ತಮ್ಮ ಆವಿಷ್ಕಾರಗಳನ್ನು ಪ್ರಾಯೋಗಿಕವಾಗಿ ನಡೆಸಲು ಅವರಿಗೆ ಅವಕಾಶವಿದೆ ಎಂದೂ ಸಚಿವರು ಹೇಳಿದರು. 

ರಾಜ್ಯದ ಪ್ರತಿ ಕುಗ್ರಾಮವು ಸುಸ್ಥಿರವಾಗಿರುವಂತೆ ಕ್ರಮ ವಹಿಸುವುದು ನಮ್ಮ ಗುರಿಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿನ ನೀರಿನ ಕೊರತೆ ಹಾಗೂ ನೈರ್ಮಲ್ಯ ದ ಸವಾಲುಗಳನ್ನು ಎದುರಿಸಲು ಸೂಕ್ತ ಸುಧಾರಿತ ತಂತ್ರಜ್ಞಾನ ಅಳವಡಿಕೆಗೆ ಪ್ರಯತ್ನಿಸಲಾಗುತ್ತಿದೆ. ಜಾಗತಿಕ ತಜ್ಞರೊಂದಿಗೆ ಚರ್ಚಿಸಿ ಸಮರ್ಥನೀಯ ಕಾರ್ಯತಂತ್ರಗಳ ಮೂಲಕ ಆರೋಗ್ಯಯುತ ಸುಸ್ಥಿರ ಗ್ರಾಮೀಣ ಕರ್ನಾಟಕ ರೂಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದರು.