ವಯನಾಡ್ ಗುಡ್ಡ ಕುಸಿತ: ಸಂತ್ರಸ್ತ ಕನ್ನಡಿಗರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್
Wayanad hill collapse: Labor Minister Santhosh Lad met the affected Kannadigas and inquired about their well-being.
ಮೆಪ್ಪಾಡಿ (ಕೇರಳ) : ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಗುಡ್ಡ ಕುಸಿತದಿಂದ ತೊಂದರೆಗೊಳಗಾಗಿರುವ ಕನ್ನಡಿಗರ ರಕ್ಷಣೆಗೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು, ಸಂತ್ರಸ್ತರು ರಕ್ಷಣೆ ಪಡೆದಿರುವ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಮೆಪ್ಪಾಡಿಯಲ್ಲಿನ ಸಂತ ಜೋಸೆಫ್ ಹೈಸ್ಕೂಲ್‌ನಲ್ಲಿ ಗುಡ್ಡ ಕುಸಿತದಿಂದ ತೊಂದರೆಗೊಳಗಾಗಿರುವ ಜನರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದ್ದು, ಇಲ್ಲಿಗೆ ಭೇಟಿ ನೀಡಿದ್ದ ಸಚಿವರು ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಇಲ್ಲಿ 40 ಕನ್ನಡಿಗರಿಗೂ ಆಶ್ರಯ ನೀಡಲಾಗಿದೆ. ಅವರಿಂದ ಮಾಹಿತಿ ಪಡೆದರು. ಜನರಿಗೆ ಆಶ್ರಯ ನೀಡಿ ಸಹಾಯ ಮಾಡಿರುವ ಸಿಸ್ಟರ್ ಫಿಲೋಮಿನಾ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು. ತೊಂದರೆಗೊಳಗಾಗಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅವರಿಗೆ ಅಗತ್ಯ ನೆರವನ್ನು ಒದಗಿಸಲಾಗುತ್ತಿದೆ. ನಮ್ಮ ರಾಜ್ಯ ಸರ್ಕಾರ ಸಹ ಎಲ್ಲಾ ರೀತಿಯಲ್ಲಿ ಸಹಾಯಕ್ಕೆ ಧಾವಿಸಿದೆ ಎಂದು ಸಚಿವರು ತಿಳಿಸಿದರು.
ಇದೊಂದು ದುಃಖದ ಘಟನೆ. ಮನೆಗಳು ಕೊಚ್ಚಿ ಹೋಗಿರುವ ಜಾಗಗಳಿಗೆ ಭೇಟಿ ನೀಡಿದ್ದೆ. ಅಲ್ಲಿನ ಜನರ ನೋವು ಹೇಳತೀರದು. ಕರ್ನಾಟಕದ ಹನ್ನೊಂದು ಜನ ನಾಪತ್ತೆಯಾಗಿರುವ ಮಾಹಿತಿ ಇದೆ. ರಕ್ಷಣೆ ಆದವರನ್ನು ಭೇಟಿ ಮಾಡಿದ್ದೇನೆ. ನಾಪತ್ತೆಯಾದವರು ಇಲ್ಲಿಯೇ ಹಲವು ವರ್ಷಗಳಿಂದ ವಾಸವಿದ್ದವರು. ಅವರಿಗೆ ನಮ್ಮ ಅಧಿಕಾರಿಗಳು ಬೇಕಾದ ಎಲ್ಲಾ ಸಹಾಯವನ್ನು ಮಾಡಲಿದ್ದಾರೆ. ಪುನರ್ವಸತಿ ಇಲ್ಲಿ ಆಗದಿದ್ದರೆ ನಮ್ಮ ರಾಜ್ಯಕ್ಕೆ ಬಂದರೆ ಮನೆ ನೀಡಲು ಮುಖ್ಯಮಂತ್ರಿಗಳು ತಾಕೀತು ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.
"ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವು ಒದಗಿಸಲು ನಮ್ಮ ಸರ್ಕಾರ ಬದ್ಧವಿದೆ. ನಮ್ಮ ರಾಜ್ಯದ ಹಲವು ಜಿಲ್ಲೆಗಳಿಂದ ಸ್ವಯಂಸೇವಕರು ಇಲ್ಲಿ ನೆರವು ಒದಗಿಸುತ್ತಿದ್ದಾರೆ. ಕರ್ನಾಟಕದವರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತೇವೆ" ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಗುಡ್ಡ ಕುಸಿತ ದುರಂತ ನಡೆದ ಕೇರಳದ ವಯನಾಡಿಗೆ ತೆರಳಿರುವ ಸಚಿವ ಸಂತೋಷ್ ಲಾಡ್ ಅವರು ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿದ್ದಾರೆ.