ಬೆಂಗಳೂರಿನಲ್ಲಿ 22ನೇ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಸಮಾವೇಶ
ಬೆಂಗಳೂರು : ಬೆಂಗಳೂರಿನಲ್ಲಿ ನವೆಂಬರ್ 14ರಿಂದ ಮೂರು ದಿನಗಳ 22ನೇ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್
ಪರಿಸರಸ್ನೇಹಿ ಕಟ್ಟಡ ನಿರ್ಮಾಣಗಳಿಗೆ ಒತ್ತು ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಷನ್ ಮತ್ತು ಸಂಬಂಧಿತ ಸೇವೆಗಳ ಕ್ಷೇತ್ರದ ಸಿಐಐ ಐಜಿಬಿಸಿ (ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್) ಸಂಸ್ಥೆ ಬೆಂಗಳೂರಿನಲ್ಲಿ 22ನೇ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಸಮಾವೇಶವನ್ನು ಆಯೋಜಿಸಿದೆ.
ನವೆಂಬರ್ 14ರಿಂದ 16ರವರೆಗೆ “ಗ್ರೀನ್ ಹೋಮ್ಸ್- ಟವರ್ಡ್ಸ್ ನೆಟ್ ಝೀರೋ” ಘೋಷವಾಕ್ಯದಡಿ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ನಡೆಯಲಿದೆ. ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ 2024 ಪರಿಸರಸ್ನೇಹಿ ನಿರ್ಮಾಣದಲ್ಲಿ ಏಷ್ಯದ ಅತಿದೊಡ್ಡ ಸಮಾವೇಶವಾಗಿದ್ದು, ಸುಸ್ಥಿರ ನಿರ್ಮಾಣ ಚಟುವಟಿಕೆ ಮತ್ತು ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಉದ್ಯಮದ ವೃತ್ತಿಪರರು, ವಾಸ್ತುಶಿಲ್ಪಿಗಳು, ಬಿಲ್ಡರ್ ಮತ್ತು ನೀತಿ ನಿರೂಪಕರಿಗೆ ಜ್ಞಾನ ವಿನಿಮಯ ಮಾಡಿಕೊಳ್ಳಲು ವೇದಿಕೆ ಕಲ್ಪಿಸುತ್ತಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಐಜಿಬಿಸಿ ಬೆಂಗಳೂರು ಘಟಕದ ಅಧ್ಯಕ್ಷ ಮತ್ತು ಆಲ್ಟ್‌ಟೆಕ್ ಫೌಂಡೇಷನ್‌ನ ಟ್ರಸ್ಟಿ ಡಾ. ಚಂದ್ರಶೇಖರ್ ಹರಿಹರನ್ ಅವರು “ಭಾರತದಲ್ಲಿ ಪರಿಸರಸ್ನೇಹಿ ನಿರ್ಮಾಣಗಳನ್ನು ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಪ್ರೋತ್ಸಾಹಿಸುತ್ತ ಬಂದಿದೆ. ಪ್ರಸ್ತುತ 12 ಶತಕೋಟಿ ಚದರ ಅಡಿಗೂ ಮೀರಿದ ಪರಿಸರಸ್ನೇಹಿ ಕಟ್ಟಡಗಳು ಮತ್ತು 14,500ಕ್ಕೂ ಹೆಚ್ಚು ಪ್ರಮಾಣಿತ ನಿರ್ಮಾಣ ಯೋಜನೆಗಳು ಐಜಿಪಿಸಿಯಡಿ ನೋಂದಣಿಗೊಂಡಿವೆ. ಹವಾಮಾನ ಬದಲಾವಣೆ, ಸುಸ್ಥಿರ ಪರಿಕರಗಳು ಮತ್ತು ಶೂನ್ಯ ಇಂಗಾಲದಂಥ ಪ್ರಮುಖ ವಿಷಯಗಳನ್ನು 22ನೇ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಚರ್ಚಿಸಲಿದೆ. ಐಜಿಬಿಸಿ ಬೆಂಗಳೂರು ಶಾಖೆಗೆ ಕರ್ನಾಟಕ ಸರಕಾರ ನಿರಂತರ ಬೆಂಬಲ ನೀಡುತ್ತಿದ್ದು, ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೆ ತರಲು ಇದು ಸಹಕಾರಿಯಾಗಲಿದೆ” ಎಂದು ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರಸ್ನೇಹಿ ನಿರ್ಮಾಣ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸುವಮೂಲಕ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್, ಗ್ರೀನ್ ಬಿಲ್ಡಿಂಗ್ ಕ್ಷೇತ್ರದ ಬಗ್ಗೆ ಅರಿವು ಮೂಡಿಸಲಿದೆ. ಸಮಾವೇಶದಲ್ಲಿ ಭಾಗವಹಿಸುವವರು ತಮ್ಮ ಮನೆ, ಕಚೇರಿ ಮತ್ತು ಕಟ್ಟಡಗಳಲ್ಲಿ ಬಳಸಬಹುದಾದ ಪರಿಸರಸ್ನೇಹಿ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಪಡೆಯಬಹುದು. ಈ ವರ್ಷದ ಕಾಂಗ್ರಸ್‌ನಲ್ಲಿ 1,000ಕ್ಕೂ ಹೆಚ್ಚು ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗಿದೆ.
ಸಿಐಐ ಗ್ರೀನ್ ಬಿಸಿನೆಸ್ ಸೆಂಟರ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ.ಎಸ್. ವೆಂಕಟಗಿರಿ ಅವರು ಮಾತನಾಡಿ “ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಸಿಐಐಯ ಪ್ರಮುಖ ವಾರ್ಷಿಕ ಸಮಾವೇಶವಾಗಿದ್ದು 18 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ವರ್ಷದ ಕಾಂಗ್ರೆಸ್ ಕಾಕತಾಳೀಯ ಎಂಬಂತೆ ವಿಶ್ವದ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಏಷ್ಯಾ ಪೆಸಿಫಿಕ್ ನೆಟ್‌ವರ್ಕ್ ಮೀಟ್ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಜೊತೆಗೆ ನಡೆಯುತ್ತಿದೆ. ಹಾಗಾಗಿ 13 ಇತರ ರಾಷ್ಟ್ರಗಳೂ ಇದರಲ್ಲಿ ಭಾಗವಹಿಸುತ್ತಿವೆ” ಎಂದು ತಿಳಿಸಿದರು.
ಐಜಿಬಿಸಿ ಬೆಂಗಳೂರು ಶಾಖೆಯ ಸಹ ಅಧ್ಯಕ್ಷ ಮತ್ತು ಅರ್ಬನ್ ಫ್ರೇಮ್ ನಿರ್ದೇಶಕ ಅನೂಪ್ ನಾಯಕ್ ಇನ್ನಿತರರು ಉಪಸ್ಥಿತರಿದ್ದರು.