ಬೀದರ್ ನಾಗರೀಕ ವಿಮಾನಯಾನ ಪುನಾರಂಭಕ್ಕೆ ಸಂಪುಟದ ಸಮ್ಮತಿ : ಸಚಿವ ಈಶ್ವರ ಬಿ ಖಂಡ್ರೆ
Cabinet approves resumption of Bidar Civil Aviation: Minister Ishwar B Khandre
ಬೆಂಗಳೂರು : ಕಳೆದ 10 ತಿಂಗಳುಗಳಿಂದ ಸ್ಥಗಿತಗೊಂಡಿರುವ ಬೀದರ್ ನಾಗರೀಕ ವಿಮಾನಯಾನ ಸೇವೆಯನ್ನು ಪುನಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಭೆಯ ಬಳಿಕ ವಿವರ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಉಡಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ವಿಮಾನ ಯಾನ ಸೇವೆ ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಸಬ್ಸಿಡಿ ನೀಡಿ ಕರುನಾಡ ಕಿರೀಟ ಬೀದರ್ ಗೆ ವಾಯುಯಾನ ಕಲ್ಪಿಸಲು ನಿರ್ಧರಿಸಿದೆ ಎಂದರು.
ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ಸಬ್ಸಿಡಿ ಹಣದ ಪೈಕಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಶೇ. 70ರಷ್ಟು ಮತ್ತು ರಾಜ್ಯ ಸರ್ಕಾರ ಶೇ.30 ಭರಿಸಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ವಿಮಾನಯಾನ ಸೇವೆ ಪುನಾರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರವಾಸೋದ್ಯಮಕ್ಕೆ ಆದ್ಯತೆ:
ಬೀದರ್ ಸರ್ವ ಧರ್ಮ ಸಮನ್ವಯ ಕೇಂದ್ರ. ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಇಸಾಯಿಗಳು ಅಣ್ಣತಮ್ಮಂದಿರಂತೆ ಬಾಳುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಬಸವಾದಿ ಶರಣರ ಅನುಭವ ಮಂಟಪ ಇರುವ ಬಸವಕಲ್ಯಾಣವೂ ಇದೆ. ಗುರುನಾನಕ್ ಝೀರಾ ಗುರುದ್ವಾರವೂ ಇದೆ. 1460ರಲ್ಲಿ ಆರಂಭವಾದ ಮಹಮದ್ ಗವಾನರ ಮದರಸಾ ಇದೆ. ಝರಣಿ ನರಸಿಂಹಸ್ವಾಮಿ ದೇವಾಲಯವೂ ಇದೆ ಜೊತೆಗೆ ಬೀದರ್ ಕೋಟೆಯ ವಿಶಿಷ್ಟ ಕರೇಜ್ ಇದೆ. ಈಗ ಕೃಷ್ಣ ಮೃಗಗಳ ಸಂರಕ್ಷಿತ ತಾಣವೂ ಸಿದ್ಧವಾಗುತ್ತಿದೆ, ಹೀಗಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ನಾಗರೀಕ ವಿಮಾನಯಾನ ಸೇವೆಯಿಂದ ಇದಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂದರು.
ದೇಶದಲ್ಲೇ ವಿಶಿಷ್ಟವಾದ ಬಿದರೀ ಕಲೆಗೆ ಬೀದರ್ ಜಿಲ್ಲೆ ವಿಶ್ವ ವಿಖ್ಯಾತವಾಗಿದೆ. ಹೀಗಾಗಿ ಕ್ಷೇತ್ರವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಬೇಕಾದರೆ ನಾಗರೀಕ ವಿಮಾನಯಾನ ಸೇವೆ ಅತ್ಯಗತ್ಯ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದರು.
ಬಸವ ಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ ಬೀದರ್ ವಾಯುಯಾನಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ಜನರ ಬೇಡಿಕೆಯ ಸಮಯಕ್ಕೆ ಅನುಗುಣವಾಗಿ ವಿಮಾನಯಾನ ಸೇವೆ ಕಲ್ಪಿಸಿದಲ್ಲಿ ವಿಮಾನಯಾನ ಪೂರೈಕೆ ಸಂಸ್ಥೆಗೂ ನಷ್ಟವಾಗುವುದಿಲ್ಲ. ಜನರಿಗೂ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.