ನೇಕಾರರು ಹಾಗು ಕುಶಲಕರ್ಮಿಗಳ ಬದುಕಲ್ಲಿ ಬೆಳಕಾದ ನರೇಂದ್ರ ಮೋದಿ ಸರ್ಕಾರ: ತೇಜಸ್ವೀ ಸೂರ್ಯ
ಬೆಂಗಳೂರು : ದೇಶದ ಕೋಟ್ಯಂತರ ನೇಕಾರರು ಹಾಗು ಕುಶಲಕರ್ಮಿಗಳ ಸರ್ವತೋಮುಖ ಬೆಳವಣಿಗೆಗಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರ ನೆರವಾಗಿದೆ. ಪಿಎಂ ವಿಶ್ವಕರ್ಮ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳಿಂದ ನೇಕಾರರು ಹಾಗು ಕುಶಲಕರ್ಮಿಗಳ ಬದುಕಿನಲ್ಲಿ ಮಹತ್ತರ ಪರಿವರ್ತನೆಗಳಾಗಿವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವೀ ಸೂರ್ಯ ಹೇಳಿದ್ದಾರೆ.
ಸಂಪಂಗಿರಾಮನಗರದ ದೇವಾಂಗ ಭವನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗಿಯಾಗಿದ್ದ ತೇಜಸ್ವಿ ಸೂರ್ಯ ರವರು ಕುಶಲಕರ್ಮಿಗಳು ಹಾಗು ನೇಕಾರರ ಅಭಿವೃದ್ಧಿಗಾಗಿ ಶ್ರೀ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕಾರ್ಯಗಳ ಬಗ್ಗೆ ವಿವರಿಸಿದರು. ದೇವಾಂಗ ಸಮಾಜದ ಮುಖಂಡರ ಜೊತೆ ನಡೆದ ಸಭೆಯಲ್ಲಿ ಸೂರ್ಯ ರವರು ಮಾತನಾಡಿ “ಈ ಮೊದಲು ನೇಕಾರರು & ಕುಶಲಕರ್ಮಿ ಸಮುದಾಯ ಅಸಂಘಟಿತವಾಗಿತ್ತು, ಸರ್ಕಾರದ ಯೋಜನೆಗಳಿಂದ ಈ ಸಮುದಾಯ ವಂಚಿತವಾಗುತ್ತಿತ್ತು, ದೇಶಿಯ ಕರಕುಶಲ ಕಲೆ ಅಳಿವಿನ ಅಂಚಿನತ್ತ ಸಾಗುತಿತ್ತು, ನೇಕಾರರು ಹಾಗೂ ಕುಶಲಕರ್ಮಿಗಳ ಸಮಸ್ಸೆಯನ್ನು ಗುರುತಿಸಿದ ನರೇಂದ್ರ ಮೋದಿ ಸರ್ಕಾರ ಸಾಂಪ್ರದಾಯಿಕ ಕಲೆಗಳನ್ನು ಉಳಿಸುವ ಉದ್ದೇಶದಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳನ್ನು ಒಳಗೊಂಡ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಮೂಲಕ ನೇಕಾರರು ಹಾಗು ಕುಶಲಕರ್ಮಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಮತ್ತು ಖಾತರಿ ರಹಿತ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಇದಷ್ಟೇ ಅಲ್ಲದೇ ನೇಕಾರರು ಮತ್ತು ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಕಳೆದ ಬಜೆಟ್‌ನಲ್ಲಿ 13 ಸಾವಿರ ಕೋಟಿ ರೂ ಅನುದಾನ ನೀಡಿದ್ದಾರೆ. ಈ ಹಿಂದಿನ ಎಲ್ಲಾ ಸರ್ಕಾರಗಳು ಈ ಸಮುದಾಯವನ್ನು ಕಡೆಗಣಿಸಿದ್ದವು ಆದರೆ ಮೋದಿ ಸರ್ಕಾರ ನೇಕಾರರು & ಕುಶಲಕರ್ಮಿ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಿದಕ್ಕೆ ಧನ್ಯವಾದಗಳು” ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳ ಮುದ್ರಾ ಯೋಜನೆಯ ಮಹತ್ವದ ಬಗ್ಗೆ ತೇಜಸ್ವಿ ಸೂರ್ಯ ಮಾತನಾಡಿ“ ಪಿಎಂ ಮುದ್ರಾ ಯೋಜನೆಯ ಮೂಲಕ ನೇಕಾರರು ಹಾಗೂ ಕುಶಲಕರ್ಮಿಗಳಿಗೆ ಸಣ್ಣ ಮತ್ತು ಅತಿ ಸಣ್ಣ ಉದ್ಯಮ ಆರಂಭಿಸಲು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಟ್ಯಾಂತರ ಜನರು ಈ ಯೋಜನೆ ಸಹಾಯದಿಂದ ತಮ್ಮ ಸ್ವಂತ ಉದ್ಯಮ ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಫಲಾನುಭವಿಗಳಾಗಿರುವುದು ವಿಶೇಷ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವ ಮೋದಿ ಸರ್ಕಾರ ಇಂತಹ ಯೋಜನೆಗಳಿಂದ ಉದ್ಯೋಗ ಬಯಸುವವರನ್ನು ಉದ್ಯೋಗದಾತರನ್ನಾಗಿ ಮಾಡಿದೆ. ರಾಜ್ಯದಲ್ಲಿ ಕೂಡ ಈ ಹಿಂದೆ ಕೂಡ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ “ನೇಕಾರ ಸಮ್ಮಾನ್ ನಿಧಿ” ಯೋಜನೆ ಜಾರಿಗೆ ತಂದಿದ್ದು, ನೇಕಾರ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಸರ್ಕಾರವು ಸಕಲ ರೀತಿಯ ಪ್ರೋತ್ಸಾಹ ನೀಡಿದೆ” ಎಂದು ತಿಳಿಸಿದರು.
ಇದೇ ವೇಳೆ ಕಳೆದ 10 ವರ್ಷಗಳಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡೆದುಕೊಂಡಿದೆ ಎಂದು ತಿಳಿಸಿದ ತೇಜಸ್ವಿ ಸೂರ್ಯ ರವರು ಸಂಸದನಾಗಿ ಆಯ್ಕೆಯಾದ ನಂತರ ಕಳೆದ 5 ವರ್ಷಗಳಲ್ಲಿ ಬೆಂಗಳೂರು ದಕ್ಷಿಣದ ಕ್ಷೇತ್ರದ ಅಭಿವೃದ್ಧಿಗಾಗಿ ತಾವು ಕೈಗೊಂಡ ಕಾರ್ಯಗಳನ್ನು ಸಹ ವಿವರಿಸಿದರು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಮುಖಂಡರಾದ ಡಾ.ಜಿ.ರಮೇಶ್, ಭಾಸ್ಕರ್ ಗಿಣಿ, ಪಾರ್ವತಿ, ವಿಜಯಕುಮಾರ್, ಊರುಕೆರೆ ಜಿ. ದಯಾನಂದ, ಲಕ್ಷ್ಮೀ ನಾರಾಯಣ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.