ತೇಜಸ್ವೀ ಸೂರ್ಯ ಪರವಾಗಿ ಎಚ್.ಡಿ.ಕುಮಾರ ಸ್ವಾಮಿ ಭರ್ಜರಿ ರೋಡ್ ಶೋ.
ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರ ಸ್ವಾಮಿ ಭಾನುವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ಪರವಾಗಿ ಗೋವಿಂದರಾಜ ನಗರ & ವಿಜಯನಗರದ ವಿವಿಧೆಡೆ ಬೈಕ್ ರ್ಯಾಲಿ ನಡೆಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.
ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ತೇಜಸ್ವೀ ಸೂರ್ಯ, “ಗೌರವಾನ್ವಿತ ಮಾಜಿ ಪ್ರಧಾನಿಯವರಾದ ಎಚ್.ಡಿ.ದೇವೇಗೌಡ ರವರು ಕ್ಷೇತ್ರದಲ್ಲಿನ ನನ್ನ ಕಾರ್ಯಗಳಿಗೆ ಅನೇಕ ಬಾರಿ ಶ್ಲಾಘನೆ ವ್ಯಕ್ತಪಡಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿರುವುದು ನನಗೆ ಶ್ರೀರಕ್ಷೆ . ಕುಮಾರಣ್ಣ ಅವರು ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರಕ್ಕೆ ಬಂದು ಬೆಂಬಲ ಸೂಚಿಸಿರುವುದು ಮತ್ತಷ್ಟು ಆನೆಬಲ ಬಂದಂತಾಗಿದೆ.
ಜೆಡಿಎಸ್ ಸೇರ್ಪಡೆಯಿಂದ ಎನ್.ಡಿ.ಎ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬಂದಿದ್ದು, ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳೂ ಎನ್.ಡಿ.ಎ ಪಾಲಾಗಲಿರುವುದು ನಿಶ್ಚಿತ. ಮೋದಿಯವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪರಸ್ಪರ ಹೆಗಲು ಕೊಟ್ಟು ಸಮನ್ವಯತೆಯಿಂದ ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಬಿಜೆಪಿಯ ಸಂಕಲ್ಪ ಪತ್ರವನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿಯವರು ಹತ್ತು ವರ್ಷಗಳಲ್ಲಿ ಕೈಗೊಂಡ ಮಹತ್ಕಾರ್ಯಗಳನ್ನು ವಿವರಿಸುತ್ತಿದ್ದಾರೆ. ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರ ತೀರ್ಪು ಈಗಲೇ ಸ್ಪಷ್ಟವಾಗಿದೆ.
ಜನರಿಗೆ ಅಗತ್ಯವಾಗಿ ಬೇಕಿರುವುದು ಆರೋಗ್ಯ, ಅನ್ನ, ನೀರು, ಸೂರು. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಹತ್ತು ವರ್ಷಗಳಲ್ಲಿ ಬಡವರು, ದೀನದಲಿತರು ಮತ್ತು ಶೋಷಿತರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ 81 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದ್ದು, ಯೋಜನೆಯನ್ನು ಇನ್ನೂ 5 ವರ್ಷ ಗಳ ವರೆಗೆ ವಿಸ್ತರಿಸಲಾಗಿದೆ. 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಪಿಎಂ ಅವಾಸ್ ಯೋಜನೆಯಡಿ 4.1 ಕೋಟಿಗೂ ಅಧಿಕ ಮನೆಗಳು ನಿರ್ಮಾಣವಾಗಿದ್ದು, ಸೌಭಾಗ್ಯ ಯೋಜನೆಯಡಿ 2.85 ಕೋಟಿ ಮನೆಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. 14.5 ಕೋಟಿಗೂ ಅಧಿಕ ಮನೆಗಳಿಗೆ ನಲ್ಲಿ ನೀರು ಸಂಪರ್ಕ ನೀಡಲಾಗಿದ್ದು, ಪಿಎಂ ಉಜ್ವಲಾ ಯೋಜನೆಯಡಿ 10 ಕೋಟಿಗೂ ಅಧಿಕ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿದೆ. ಸರ್ವರ ಒಟ್ಟಾರೆ ಅಭಿವೃದ್ಧಿಯ ಬಿಜೆಪಿ ಗ್ಯಾರಂಟಿಗಳು ಶಾಶ್ವತ.
ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಅನೇಕ ಜನಪರ ಕಾರ್ಯಗಳು ಯಶಸ್ವಿಯಾಗಿ ಜಾರಿಗೊಂಡಿವೆ. ರಸ್ತೆ, ಮೆಟ್ರೋ ಸೇರಿದಂತೆ ಮೂಲ ಸೌಕರ್ಯ ಯೋಜನೆಗಳು ಭರದಿಂದ ಸಾಗಿವೆ. ಕೆಲವೇ ತಿಂಗಳಲ್ಲಿ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದ್ದು, ದಕ್ಷಿಣ ಭಾಗದ ನಾಗರಿಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಮೆಟ್ರೋ ವಿಸ್ತರಣೆ, ಸಬರ್ಬನ್ ರೈಲು, ಉಪನಗರ ಹೊರ ವರ್ತುಲ ರಸ್ತೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ.” ಎಂದು ತೇಜಸ್ವೀ ಸೂರ್ಯ ಹೇಳಿದರು.
ಸಮನ್ವಯ ಮೈತ್ರಿಯಿಂದ ಗೆಲುವು ಖಾತ್ರಿ: ಎಚ್.ಡಿ.ಕುಮಾರ ಸ್ವಾಮಿಯವರು ಮಾತನಾಡಿ, ಜೆಡಿಎಸ್ & ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಧೂಳಿಪಟವಾಗಲಿದೆ. ಜನರಿಗೆ ಕಾಂಗ್ರೆಸ್ ನ ಪೊಳ್ಳು ಗ್ಯಾರಂಟಿಗಳು ಅರ್ಥವಾಗಿವೆ. ಗ್ಯಾರಂಟಿಗಳಿಂದ ತಮ್ಮನ್ನು ಸಾಲದ ಶೂಲಕ್ಕೆ ಸಿಲುಕಿಸುತ್ತಾರೆ ಎಂಬುದು ಜನರಿಗೆ ಗೊತ್ತಾಗಿದೆ. ಪ್ರಧಾನಿ ನರೇಂದ್ರಮೋದಿಯವರು ಜನ ಕಲ್ಯಾಣಕ್ಕೆ ಜಾರಿಗೊಳಿಸಿರುವ ಯೋಜನೆಗಳ ಪರವಾಗಿ ಜನರು ಮತ ಹಾಕಲಿದ್ದಾರೆ. ರಾಜ್ಯಕ್ಕೆ ನರೇಂದ್ರಮೋದಿಯವರ ಕೊಡುಗೆ ಅಪಾರ. ಎಲ್ಲ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವೀ ಸೂರ್ಯ ಐದು ವರ್ಷಗಳಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಮನೆಯೂ ಇದೇ ಕ್ಷೇತ್ರದಲ್ಲಿದ್ದು, ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿಯನ್ನು ಅವರು ಹೊಂದಿದ್ದಾರೆ. ಯುವಕರನ್ನು ಒಟ್ಟಾಗಿ ಮುನ್ನಡೆಸುವ ಸೂರ್ಯರವರು ಉತ್ತಮ ಸಂಸದೀಯ ಪಟುವಾಗಿರುವುದು ಸಂತೋಷದ ವಿಷಯ " ಎಂದರು.
ಶಾಸಕರಾದ ಸಿ ಕೆ.ರಾಮಮೂರ್ತಿ, ಬಿಜೆಪಿ ಮುಖಂಡರಾದ ಎಚ್.ರವೀಂದ್ರ , ಟಿ.ವಿ ಕೃಷ್ಣ, ವಿಶ್ವನಾಥ ಗೌಡ, ತುಳಸೀ ರಾಮ್, ರಮೇಶ್ ಗೌಡ, ಎಸ್ ರಮೇಶ್, ರಾಮಾಂಜನಿ ಸೇರಿದಂತೆ ಬಿಜೆಪಿ – ಜೆಡಿಎಸ್ ನ ಅಪಾರ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.