ಬಿಜೆಪಿ ಮುಖಂಡ ಎನ್.ಆರ್. ರಮೇಶ್ ರವರಿಂದ ಮುಡಾ ಹಗರಣದ ಲೋಕಾಯುಕ್ತಕ್ಕೆ ಮತ್ತಷ್ಟು ಮಹತ್ವದ ದಾಖಲೆ

NR Ramesh releases further documents of Muda scam to Lokayukta

ಬಿಜೆಪಿ ಮುಖಂಡ ಎನ್.ಆರ್. ರಮೇಶ್ ರವರಿಂದ ಮುಡಾ ಹಗರಣದ  ಲೋಕಾಯುಕ್ತಕ್ಕೆ ಮತ್ತಷ್ಟು ಮಹತ್ವದ ದಾಖಲೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಮತ್ತಷ್ಟು ಮಹತ್ವದ ದಾಖಲೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬವರ್ಗದವರು ಭಾಗಿಯಾಗಿದ್ದಾರೆ೦ದು ಆರೋಪಿಸಲಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಲೋಕಾಯುಕ್ತಕ್ಕೆ 400 ಪುಟಗಳ ದಾಖಲೆ ನೀಡಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದ 25 ಪುಟಗಳ ಮತ್ತಷ್ಟು ಮಹತ್ವಪೂರ್ಣ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿದ್ದಾರೆ.

1997-98ರ ಅವಧಿಯಲ್ಲಿ ಅಭಿವೃದ್ಧಿ ಪಡಿಸಿ ಡಾಂಬರೀಕರಣಗೊಂಡ ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿಗಳು, ಕುಡಿಯುವ ನೀರಿನ ಕೊಳವೆಗಳು, ಒಳಚರಂಡಿ ಕೊಳವೆಗಳು ಮತ್ತು ಬೀದಿದೀಪಗಳನ್ನು ಒಳಗೊಂಡ ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿತ್ತು ಹಾಗೂ ಮೂರ್ನಾಲ್ಕು ವರ್ಷಗಳಲ್ಲಿಯೇ ಸದರಿ ಬಡಾವಣೆಯಲ್ಲಿ ಹತ್ತಾರು ಕಟ್ಟಡಗಳು ತಲೆಎತ್ತಿದ್ದವು.

ಆದರೆ, ಅದಾಗಲೇ ಅಭಿವೃದ್ಧಿಗೊಂಡಿದ್ದ ಸದರಿ ಬಡಾವಣೆಯಲ್ಲಿ 3.16 ಎಕರೆ ವಿಸ್ತೀರ್ಣದ ಪ್ರದೇಶವನ್ನು ಭೂಪರಿವರ್ತನೆ ಮಾಡಿ ಕೊಡುವಂತೆ 2004ರಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಅಂದಿನ ಜಿಲ್ಲಾಧಿಕಾರಿಗಳು ತಾಲೂಕು ತಹಸೀಲ್ದಾರರ ವರದಿಯನ್ನಾಧರಿಸಿ 2005ರಂದು ಖುದ್ದು ಸ್ಥಳ ಪರಿಶೀಲನೆ ಮಾಡಿ ಮೈಸೂರು ತಾಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೆನಂ: 464ರ 3.16 ಎಕರೆ ವಿಸ್ತೀರ್ಣದ ವ್ಯವಸಾಯದ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಭೂಪರಿವರ್ತನೆ ಮಾಡಲು ಅನುಮತಿ ನೀಡಲಾಗಿದೆ ಎಂದು ಸ್ಥಳ ತನಿಖಾ ಟಿಪ್ಪಣಿಯಲ್ಲಿ ಬರೆಯಲಾಗಿದೆ.

2005ಕ್ಕೂ ಏಳೆಂಟು ವರ್ಷಗಳ ಹಿಂದೆಯೇ ಸಂಪೂರ್ಣ ಅಭಿವೃದ್ಧಿ ಪಡಿಸಲಾಗಿದ್ದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ವ್ಯವಸಾಯದ ಜಮೀನು ಇರಲು ಹೇಗೆ ಸಾಧ್ಯ. 2004-2006ರ ಅವಧಿಯಲ್ಲಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರ ರಾಜಕೀಯ ಪ್ರಭಾವಕ್ಕೆ ಮತ್ತು ಒತ್ತಡಗಳಿಗೆ ಒಳಗಾಗಿದ್ದ ಆಗಿನ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್‌ಗಳು ಈ ರೀತಿಯ ಹಾಸ್ಯಾಸ್ಪದ ಮತ್ತು ಕಾನೂನು ಬಾಹಿರವಾದ ಭೂಪರಿವರ್ತನೆ ಕಾರ್ಯಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.