ಕಾವ್ಯಧರ್ಮದಿಂದ ಮಾತ್ರ ಜಾಗತಿಕ ಶಾಂತಿ ಸ್ಥಾಪನೆ ಸಾಧ್ಯ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು: ಕಿರಂ ನಾಗರಾಜ ಅವರ ಕಾವ್ಯಪ್ರೇಮ, ಬಹುಮುಖ ಪ್ರತಿಭೆ, ಅನೇಕ ಶಿಷ್ಯರೊಂದಿಗಿನ ಅನುಸಂಧಾನ ಅಗಾಧವಾದುದು.ವರ್ತಮಾನದಲ್ಲಿ ಕಾವ್ಯಧರ್ಮವೇ ಮುಖ್ಯವಾಗಿ ಇನ್ನೆಲ್ಲ ಧರ್ಮಗಳು ಲಯವಾದರೆ ಮಾತ್ರ ಜಗತ್ತಿನಾದ್ಯಂತ ಶಾಂತಿ ನೆಲೆಸಲು ಸಾಧ್ಯ ಎಂದು ಸಂಸ್ಕೃತಿ ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಶನ್, ಕಿರಂ ಪ್ರಕಾಶನದ ಸಹಯೋಗದಲ್ಲಿ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಡುವ ಕಿರಂ ಅಹೋರಾತ್ರಿ ಕಾರ್ಯಕ್ರಮವನ್ನು ಜನಪದ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಿರಂ ನಾಗರಾಜ ಅವರು ಗತಿಸಿ 14 ವರ್ಷಗಳಾದರೂ ಇಂದಿಗೂ ನಮ್ಮ ತಲೆಮಾರನ್ನು ಕಾಡುವ ಅವರು ಕಾವ್ಯಸಂತರಾಗಿದ್ದರು.ಅವಧೂತರಂತೆ ಸಮಾಜದ ಓರೆಕೋರೆಗಳ ಬಗ್ಗೆ ನೇರ ನೇರ ಮುಖಾಮುಖಿಯಾಗುತ್ತಿದ್ದರು.ಕಾವ್ಯದ
ಕಡುವ್ಯಾಮೋಹಿಯಾದ ಇವರು ಸಮಾಜ ವಿರೋಧಿ ಕಾರ್ಯಗಳಿಗೆ ತಕ್ಷಣ ತೀಕ್ಷ್ಣವಾದ ಪ್ರತಿಕ್ರಿಯೆ ನೀಡುತ್ತಿದ್ದರು. ತಮಗಾಗಿ ಏನೂ ಮಾಡಿಕೊಳ್ಳದ ಆದರೆ ಸಮಾಜಕ್ಕಾಗಿ,ಸಂಸ್ಕೃತಿಗಾಗಿ ಏನನ್ನಾದರೂ, ಯಾರನ್ನಾದರೂ ಎದುರಿಸಲು ಸಿದ್ಧವಾಗಿದ್ದ ಮಹಾನ್ ಚೇತನವಾಗಿದ್ದರು. ಆದಿಕವಿ ಪಂಪನಿಂದ ಹಿಡಿದು ವರ್ತಮಾನದ ಕವಿಗಳವರೆಗೂ ಎಲ್ಲರ ಕವಿತೆಗಳನ್ನು ಓದಿ ಅದರೊಂದಿಗೆ ಅನುಸಂಧಾನ ಮಾಡುತ್ತಿದ್ದರು.ಸಾಹಿತ್ಯದ ಪೂರ್ವಸೂರಿಗಳನ್ನು ಓದಲು ಪ್ರೇರೇಪಿಸುತ್ತಿದ್ದರು.ಕಾವ್ಯ ಕಮ್ಮಟ,ಕಾವ್ಯ ಪ್ರಸಾರದಲ್ಲಿ ಅವರಿಗೆ ದೊಡ್ಡ ಆಸಕ್ತಿಯಿತ್ತು,ಕಾವ್ಯ ಮಂಡಲ ಪ್ರಾರಂಭಿಸಿದರು.ಅವರು ಹೆಚ್ಚು ಬರೆಯದಿದ್ದರೂ ಕೂಡ ಅವರ ಮೌಖಿಕ ಪ್ರತಿಭೆ ಅಗಾಧವಾದುದು.ಕಾವ್ಯಧರ್ಮವೇ ಮುಖ್ಯವಾಗಿ ಇನ್ನೆಲ್ಲ ಧರ್ಮಗಳು ಲಯವಾದರೆ ಮಾತ್ರ ಜಗತ್ತಿನಾದ್ಯಂತ ಶಾಂತಿ ನೆಲೆಸಲು ಸಾಧ್ಯ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ತರಗತಿಯ ಒಳಗೆ ಕಲಿತದ್ದನ್ನು ಹೊರಗಡೆಗೆ ವಿಸ್ತಾರಗೊಳಿಸುತ್ತಿದ್ದ ಕಿರಂ ನಾಗರಾಜ ಅವರು,ಕನ್ನಡ ಕಾವ್ಯ ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡಿದ್ದರು,ಕವಿರಾಜಮಾರ್ಗದಿಂದ ಹಿಡಿದು ಪಂಪ,ರನ್ನ,ರಾಘವಾಂಕ,ಮುದ್ದಣನವರೆಗೆ ಎಲ್ಲ ಕವಿಗಳ ಬಗ್ಗೆ ಅವಿರತವಾಗಿ ದಿನಗಟ್ಟಲೇ ಮಾತನಾಡುವ ಪ್ರಕಾಂಡ ಓದಿನ ಬಹುಜ್ಞತೆಗೆ ದೊಡ್ಡ ಹೆಸರಾಗಿದ್ದರು. ಸಾಹಿತಿಯಾಗಿದ್ದು ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು.ಪ್ರಸ್ತುತ ಸಾಹಿತ್ಯ,ಸಾಂಸ್ಕೃತಿಕ ವಲಯದ ಜನರು ಶಾಂತಿಯ ಕಾಲದಲ್ಲಿ ಕ್ರಾಂತಿ ಮಾಡುತಿದ್ದು ಕ್ರಾಂತಿ ಮಾಡಬೇಕಾದ ಕಾಲದಲ್ಲಿ ಜಾಣಮೌನ ವಹಿಸುವುದು ನಮ್ಮ ಕಾಲದ ದೊಡ್ಡ ಹಿಪೊಕ್ರಸಿ ಎಂದರು.
ರಾಜ್ಯಸಭೆ ಮಾಜಿ ಉಪಸಭಾಪತಿ ಡಾ.ಎಲ್.ಹನುಮಂತಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್,ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್,ಕಿರಂ ನಾಗರಾಜ ಪುತ್ರಿಯರಾದ ಕೆ.ಎನ್.ಸಹನ, ಡಾ.ಕೆ.ಎನ್.ಕವನ, ಕೆ.ಎನ್.ಚಂದನ ಮತ್ತಿತರರು ವೇದಿಕೆಯಲ್ಲಿದ್ದರು. ಡಾ.ಪ್ರದೀಪ್ ಮಾಲ್ಗುಡಿ ಪ್ರಾಸ್ತಾವಿಕ ಮಾತನಾಡಿದರು.
ಡಾ.ಹೆಚ್.ಆರ್.ಸ್ವಾಮಿ, ಪ್ರೊ.ಎಂ.ಜೆ.ಕಮಲಾಕ್ಷಿ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ರಾಮದೇವ ರಾಕೆ,
ಡಾ.ಬಂಜಗೆರೆ ಜಯಪ್ರಕಾಶ್, ಕಾ.ತ.ಚಿಕ್ಕಣ್ಣ ಅವರಿಗೆ ಕಿರಂ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಕಾಡುವ ಕಿರಂ ಅಹೋರಾತ್ರಿ ಕಾರ್ಯಕ್ರಮದಲ್ಲಿ ಕಾವ್ಯ ಸಮಯ,ರೇಖಾ ಸಮಯ,ಜನಪದ ಗಾಯನ,ನಾಟಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.