ಕರ್ನಾಟಕದಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶೇ.45ರಷ್ಟು ಮಹಿಳಾ ಹೆಚ್.ಆರ್ ನಾಯಕಿಯರು: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ.55ಕ್ಕಿಂತಲೂ ಹೆಚ್ಚು ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಹೊಂದಿದ ರಾಜ್ಯ ಕರ್ನಾಟಕವಾಗಿದ್ದು, ಶೇ. 45% ಕ್ಕಿಂತಲೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿ.ಸಿ.ಸಿ) ಹೊಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ, 7 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಭಾರತದ ಉದ್ಯಮ ಎದುರಿಸುತ್ತಿರುವ ಕೌಶಲ್ಯದ ಅಂತರವನ್ನು ಪರಿಹರಿಸಲು ಮತ್ತು ಜಾಗತಿಕ ಉದ್ಯಮಕ್ಕೆ ಕರ್ನಾಟಕದ ನಾಯಕತ್ವದ ಸ್ಥಾನವನ್ನು ಕಾಪಾಡಿಕೊಳ್ಳಲು ನೆರವಾಗುವ ಸಲುವಾಗಿ ಭವಿಷ್ಯದ ತಂತ್ರಜ್ಞಾನಗಳ ಕೌಶಲ್ಯದ ಅಗತ್ಯತೆಗಳನ್ನು ಕೇಂದ್ರೀಕರಿಸಲು ಉದಯೋನ್ಮುಖ ತಂತ್ರಜ್ಞಾನಗಳ ಕೌಶಲ್ಯ ಸಲಹಾ ಮಂಡಳಿಯನ್ನು ಪ್ರಾರಂಭಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಕರ್ನಾಟಕದಲ್ಲಿನ ಜಾಗತಿಕ ಕಂಪೆನಿಗಳ ಪ್ರಧಾನ ಮಾನವ ಸಂಪನ್ಮೂಲ ಅಧಿಕಾರಿಗಳ (CHRO) ದುಂಡುಮೇಜಿನ ಸಭೆಯನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು. ಕರ್ನಾಟಕ ಸರ್ಕಾರವು ಜಯೊನ್ ಗ್ರೂಪ್, ನಾಸ್ಕಾಮ್, ಐಸಾ ಮತ್ತು ಎನ್.ಹೆಚ್.ಆರ್.ಡಿ (Zyoin Group, NAASCOM, ASSOCHAM, IESA ಮತ್ತು NHRD) ಸಹಯೋಗದಲ್ಲಿ ತ್ರೈಮಾಸಿಕ ಸರಣಿಗಳಲ್ಲಿ ಮೊದಲನೆಯ ಸಭೆಯನ್ನು ಇಂದು ಆಯೋಜಿಸಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಗಳ ಬೇಡಿಕೆ ಮತ್ತು ಕರ್ನಾಟಕದಲ್ಲಿನ ಪ್ರತಿಭೆ ಮತ್ತು ಪರಿಸರ ವ್ಯವಸ್ಥೆಯು ಭಾರತ ಮತ್ತು ಜಗತ್ತಿನ ಉದ್ಯಮ ಕ್ಷೇತ್ರಕ್ಕೆ ಪೂರಕವಾಗಿರುವುದರ ಒಳನೋಟಗಳನ್ನು ವಿಶ್ಲೇಷಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು.
ಕೌಶಲ್ಯ ಅಂತರವನ್ನು ವಿಶ್ಲೇಷಿಸಿ ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಕೌಶಲ್ಯ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುವುದು, ಶಿಕ್ಷಣ ಸಂಸ್ಥೆಗಳು ಮತ್ತು ಪಾಲುದಾರರಿಂದ ಉದ್ಯಮ ಸಿದ್ಧ ಪ್ರತಿಭೆಯನ್ನು ರೂಪಿಸಲು ಬಲವಾದ ಒಡಂಬಡಿಕೆ ಕುರಿತಂತೆ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ನಡೆದ ತ್ರೈಮಾಸಿಕ ಸಭೆಯ ಪ್ರಮುಖ ಚರ್ಚೆಗಳಲ್ಲಿ ಒಂದಾಗಿತ್ತು.
ಉತ್ಪಾದನಾ ವಲಯಗಳೊಂದಿಗೆ ವೇಗವನ್ನು ವೃದ್ಧಿಸಿಕೊಳ್ಳಲು ಮತ್ತು 40ಕ್ಕೂ ಹೆಚ್ಚು ಟೆಕ್ ಕಂಪನಿಗಳ ನಾಯಕರನ್ನು ಭೇಟಿ ಮಾಡಲು ಮತ್ತು ಪ್ರತಿಭೆಯನ್ನು ಹೊಂದಿರುವ ಬೆಳವಣಿಗೆಯ ಅವಕಾಶಗಳನ್ನು ಚರ್ಚಿಸಲು ಉತ್ತಮವಾದ ವಾತಾವರಣವನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತೇವೆ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದರು. ಎಐ, ಸೈಬರ್ ಸೆಕ್ಯೂರಿಟಿ, ಕ್ಲೌಡ್, ಬ್ಲಾಕ್ಚೈನ್, ವಿ.ಎಲ್.ಎಸ್.ಐ, ಎಂಬೆಡೆದ್, ವೆಬ್ 4.0, ಎಸ್.ಎಂ.ಟಿ ಉದ್ಯಮಗಳ ಬೆಳವಣಿಗೆಗಾಗಿ ನಾವು ಅವರೊಂದಿಗೆ ನಿರಂತರವಾಗಿ ಕಾರ್ಯೋನ್ಮುಖರಾಗಿದ್ದೇವೆ ಮತ್ತು ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉದ್ಯಮಗಳನ್ನು ಆಹ್ವಾನಿಸುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಉದ್ಯಮ ಮತ್ತು ಸರ್ಕಾರದ ನಡುವಿನ ಸಂಯೋಜಿತ ಕಾರ್ಯಕ್ರಮಗಳು ವಿಕಸನಗೊಳ್ಳುತ್ತಿರುವ ಪ್ರತಿಭೆಯ ಅಗತ್ಯಗಳನ್ನು ಪರಿಹರಿಸಲು ನಿರ್ಣಾಯಕವಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಇಲಾಖೆಯ ಕಾರ್ಯದರ್ಶಿ ಡಾ.ಏಕ್ರೂಪ್ ಕೌರ್ ಈ ಸಂದರ್ಭದಲ್ಲಿ ಹೇಳಿದರು. ಸರ್ಕಾರದ ನೀತಿಗಳು ಮತ್ತು ಉಪಕ್ರಮಗಳು ಉದ್ಯಮಗಳನ್ನು ಆವಿಷ್ಕರಿಸುವ ಮತ್ತು ಅಭಿವೃದ್ಧಿ ಹೊಂದುವ ವಾತಾವರಣವನ್ನು ಸೃಷ್ಟಿಸಲು ಸಜ್ಜಾಗಿದೆ, ದುಂಡುಮೇಜಿನ ಸಭೆಯಲ್ಲಿ ಮಾನವ ಸಂಪನ್ಮೂಲ ನಾಯಕರು ಹಂಚಿಕೊಂಡ ಒಳನೋಟಗಳು ನಮ್ಮ ಕಾರ್ಯತಂತ್ರದ ಉಪಕ್ರಮಗಳನ್ನು ರೂಪಿಸುವಲ್ಲಿ ಅಮೂಲ್ಯವಾದವುಗಳಾಗಿವೆ, ಇದು ರಾಜ್ಯದ ಬೆಳವಣಿಗೆ8 ಮತ್ತು ಆವಿಷ್ಕಾರಕ್ಕಾಗಿ ರಾಜ್ಯದ ಕಾರ್ಯಪಡೆಗೆ ಪ್ರಯೋಜನವನ್ನು ನೀಡುತ್ತದೆಎಂದೂ ಡಾ.ಏಕ್ರೂಪ್ ಕೌರ್ ತಿಳಿಸಿದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ಉಪ ಕಾರ್ಯದರ್ಶಿ ರುಚಿ ಹಾಗೂ ಅಧಿಕಾರಿಗಳು, ನೂರಕ್ಕೂ ಹೆಚ್ಚು ಮಾನವ ಸಂಪನ್ಮೂಲ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.