ನಿಯಮಾನುಸಾರ ಕೈಗಾರಿಕಾ ಸಿ.ಎ. ನಿವೇಶನಗಳ ಹಂಚಿಕೆ: ಎಂ ಬಿ ಪಾಟೀಲ
ಬೆಳಗಾವಿ : ಕೈಗಾರಿಕಾ ಪ್ರದೇಶಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶಗಳಿಗೆಂದು ಮೀಸಲಿಟ್ಟಿರುವ ಸಿ.ಎ. ನಿವೇಶನಗಳನ್ನು ಪಾರದರ್ಶಕವಾಗಿ ಮತ್ತು ನಿಯಮಗಳಿಗೆ ಅನುಸಾರವಾಗಿ ಹಂಚಲಾಗುತ್ತಿದೆ. ಜೊತೆಗೆ ಇದರಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಅರ್ಹರಿಗೂ ಅವಕಾಶ ಸಿಗಬೇಕೆಂದು ಮೀಸಲಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ಸ್ವಜನ ಪಕ್ಷಪಾತವಾಗಲಿ, ಅಕ್ರಮವಾಗಲಿ ಏನೂ ನಡೆದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಸಿ.ಟಿ.ರವಿ ಅವರು ಕೇಳಿದ ಪ್ರಶ್ನೆಗೆ ಅವರು ವಿವರವಾದ ಉತ್ತರ ನೀಡಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಶಾಲೆ, ಆಸ್ಪತ್ರೆ, ವಸತಿ ಸಮುಚ್ಚಯಗಳು, ಬ್ಯಾಂಕು, ಪೆಟ್ರೋಲ್ ಬಂಕ್, ಕ್ಯಾಂಟೀನ್, ಸಮುದಾಯ ಭವನ, ಆರ್ & ಡಿ ಮತ್ತು ನಾವೀನ್ಯತಾ ಕೇಂದ್ರಗಳು ಇತ್ಯಾದಿ ಉದ್ದೇಶಗಳಿಗೆಂದು ಸಿ.ಎ. ನಿವೇಶನಗಳನ್ನು ಇಟ್ಟುಕೊಳ್ಳಲಾಗಿದೆ. ಹೋಟೆಲುಗಳು ಕೂಡ ಇದರಡಿಯಲ್ಲಿಯೇ ಬರುತ್ತವೆ. ಆದರೆ, ಒಬ್ಬರಿಗೆ ಒಂದೇ ಸಿ.ಎ. ನಿವೇಶನವನ್ನು ಮಾತ್ರ ಕೊಡಬೇಕೆಂಬ ನಿರ್ಬಂಧ ಕೂಡ ಇಲ್ಲ. ಅರ್ಹ ಸಂಸ್ಥೆಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಸರಿಯಾಗಿ ಜಾಹೀರಾತು ನೀಡಿಲ್ಲ ಎನ್ನುವ ಸಿ.ಟಿ. ರವಿ ಅವರ ಆಕ್ಷೇಪಣೆಗೆ ಉತ್ತರಿಸಿದ ಪಾಟೀಲರು, `ಮುಖ್ಯ ವಾಹಿನಿಯ ರಾಜ್ಯ ಪತ್ರಿಕೆಗಳ ಜತೆಗೆ ನಾನು ಸಚಿವನಾದ ಮೇಲೆ ಆನ್ ಲೈನ್ ಮೂಲಕವೂ ಜಾಹೀರಾತು ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇನೆ. ಹೀಗೆ ಒಟ್ಟು 93 ಕಡೆಗೆ ಜಾಹೀರಾತು ನೀಡಲಾಗಿತ್ತು. 42 ಸಿ.ಎ. ನಿವೇಶನಗಳಿಗೆ ಒಂದೊಂದೇ ಅರ್ಜಿ ಬಂದಿದ್ದವು. ಇವುಗಳನ್ನು ತಿರಸ್ಕರಿಸಲಾಗಿದೆ. ಎರಡು ಸಿ.ಎ. ನಿವೇಶನಗಳನ್ನು ಉದ್ಯಮಿಗಳು ಸರಕಾರಕ್ಕೆ ಹಿಂದಿರುಗಿಸಿದ್ದಾರೆ. ಇನ್ನೂ 39 ನಿವೇಶನಗಳು ಹಾಗೆಯೇ ಉಳಿದಿವೆ’ ಎಂದು ವಿವರಿಸಿದರು.
ಹಿಂದೆಲ್ಲ ಕೈಗಾರಿಕಾ ಸಚಿವರೇ ಈ ನಿವೇಶನಗಳ ಹಂಚಿಕೆ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ, ನಾನು ಸಚಿವನಾಗಿ ಬಂದ ಮೇಲೆ ಇದಕ್ಕಾಗಿ ಕೆಐಎಡಿಬಿ ಸಿಇಒ ನೇತೃತ್ವದ ಉನ್ನತ ಸಮಿತಿಯನ್ನು ರಚಿಸಿದ್ದೇನೆ. ಒಟ್ಟು 95 ಎಕರೆಯಷ್ಟು ಜಾಗದಲ್ಲಿ ಇನ್ನೂ 152 ನಿವೇಶನಗಳಿವೆ. ಹಿಂದಿನ ಬಿಜೆಪಿ ಸರಕಾರವು ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕಿಗೆ ಸೇರಿದ ಜಾಗದಲ್ಲಿ ಒಂದು ಶಿಕ್ಷಣ ಸಂಸ್ಥೆಗೆ ಜಮೀನು ಕೊಟ್ಟಿದ್ದರಿಂದ ಬೊಕ್ಕಸಕ್ಕೆ 135 ಕೋಟಿ ರೂ. ನಷ್ಟವಾಗಿದೆ. ಇಂತಹ ಹಂಚಿಕೆಗಳಲ್ಲಿ ಪ್ರತಿಪಕ್ಷದವರು ರಾಜಕೀಯ ಮಾಡಲು ನೋಡಿದರೆ, ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ಅವರು ತಿರುಗೇಟು ನೀಡಿದರು.
ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಎಂ ಬಿ ಪಾಟೀಲ, `ಕೈಗಾರಿಕೋದ್ದೇಶಕ್ಕೆ ಜಮೀನನ್ನು ವಶಪಡಿಸಿಕೊಂಡಸಂದರ್ಭದಲ್ಲಿ ಆಯಾ ಪ್ರದೇಶದ ಮಾರ್ಗಸೂಚಿ ಬೆಲೆ ಆಧರಿಸಿ ರೈತರಿಗೆ ಆರ್ ಟಿಜಿಎಸ್ ಮೂಲಕ ನೇರವಾಗಿ ಪರಿಹಾರ ಪಾವತಿಸಲಾಗುತ್ತಿದೆ. ಮಧ್ಯವರ್ತಿಗಳು, ಜಿಪಿಎ ಹೊಂದಿರುವವರಿಗೆ ಹಣ ವರ್ಗಾಯಿಸುವ ವ್ಯವಸ್ಥೆ ಇಲ್ಲ. ನಿಯಮಗಳ ಪ್ರಕಾರ ರೈತರು ಮತ್ತು ಉದ್ಯಮಿಗಳ ಜಂಟಿ ಸಹಭಾಗಿತ್ವಕ್ಕೆ ಅವಕಾಶವಿಲ್ಲ. ಪರಿಹಾರ ಬೇಡ ಎನ್ನುವವರಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡುವುದಕ್ಕೆ ನಿಯಮಗಳಲ್ಲಿ ಅವಕಾಶ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ಸದಸ್ಯ ಟಿ ಎನ್ ಜವರಾಯಿಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವ ಪಾಟೀಲಅವರು, `ಬೆಂಗಳೂರಿನ ಜನರು ಮತ್ತು ಉದ್ಯಮಿಗಳ ಒಳಿತಿಗಾಗಿ 2ನೇ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 3-4 ಸ್ಥಳಗಳು ಸರಕಾರದ ಮುಂದಿವೆ. ಐಡೆಕ್ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಇನ್ನೊಂದು ವಾರದಲ್ಲಿ ಇದರ ಚಿತ್ರಣ ಸಿಗಲಿದೆ. ನಂತರ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆ ಸಂಸ್ಥೆಯು ಸ್ಥಳವನ್ನು ಆಖೈರು ಮಾಡುತ್ತದೆ. ಇದರಲ್ಲಿ ನನಗೇನೂ ಅಧಿಕಾರವಿಲ್ಲ’ ಎಂದರು.
ಸ್ಥಳ ಆಖೈರಾದ ಮೇಲಷ್ಟೆ ಭೂ ಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ. ಯಾವ ಜಾಗ ಅಂತಿಮವಾಗುತ್ತದೋ ಅಲ್ಲಿರುವ ಮಾರ್ಗಸೂಚಿ ದರದ ಪ್ರಕಾರ, ಜಮೀನು ಕಳೆದುಕೊಳ್ಳಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಪ್ರಯಾಣಿಕರ ದಟ್ಟಣೆ, ಕೈಗಾರಿಕಾ ಸಾಗಾಣಿಕೆ, ಸ್ಥಳದ ಭೌಗೋಳಿಕ ಲಕ್ಷಣ ಇತ್ಯಾದಿಗಳನ್ನು ಪರಿಗಣಿಸಿ, ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳವನ್ನು ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಟೀಲ ತಿಳಿಸಿದ್ದಾರೆ.