ಶ್ರೀಗುರುರಾಯರು "ವಿಶ್ವವಂದ್ಯರು"- ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ

ಬೆಂಗಳೂರು: ಶ್ರೀಗುರುರಾಯರು "ವಿಶ್ವವಂದ್ಯರು" ಎಂದು ಖ್ಯಾತ ಹರಿದಾಸ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು. ಬಿ.ಕೆ.ಪ್ರಸನ್ನ ಸಂಪಾದಕತ್ವದ ಸ್ವದೇಶಿ ಉದ್ಯಮ ಪ್ರಕಟಿತ "ಶ್ರೀಗುರು ಸಾರ್ವಭೌಮ" ವಿಶೇಷ ಸಂಚಿಕೆಯನ್ನು ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. "ಎನಗೆ ಗೋವಿಂದ" ಹಾಡಿನ ಮೂಲಕ ಹರಿದಾಸ ಪ್ರಪಂಚಕ್ಕೆ ಸ್ಪೂರ್ತಿಯಾದವರು ರಾಘವೇಂದ್ರರು. ಜಾತಿ, ಮತ, ದೇಶ ಭಾಷೆ ಪಂಥಗಳ ಭೇದಭಾವವಿಲ್ಲದೆ ಎಲ್ಲಾ ಶ್ರದ್ಧಾವಂತರಿಗೂ ಸಂತೃಪ್ತಿ, ಮನಃಶಾಂತಿ ವರ ನೀಡಿ ಅನುಗ್ರಹಿಸುತ್ತಿದ್ದಾರೆ ಮಂತ್ರಾಲಯದ ಮಹಾಮಹಿಮರು. ನಾಸ್ತಿಕ ಯುಗದ ನಿಸತ್ವ ಚೇತನಗಳಲ್ಲಿ ದೈವಭಕ್ತಿ ಆತ್ಮವಿಶ್ವಾಸ ಹಾಗೂ ವಿಚಾರ ಶ್ರದ್ಧೆ ಗಳನ್ನು ಉದ್ದೀಪಿಸಿದ ಗುರುಗಳು ವಿಶ್ವ ವಂದ್ಯರು ಎಂದು ಹೇಳಿದರು.
ಪರಮಪೂಜ್ಯ ಡಾ.ಶ್ರೀಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅನುಗ್ರಹದೊಡನೆ ನಡೆದ ವಿಶೇಷ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್ ಕೆ ವಾದೀಂದ್ರ ಆಚಾರ್ಯ, ನಂದ ಕಿಶೋರ್ ಆಚಾರ್, ಗುರು ವಿಜಯ ಪ್ರತಿಷ್ಠಾನದ ಆಚಾರ್ಯ ನಾಗರಾಜು ಹಾವೇರಿ, ಬಿ.ಕೆ.ಪ್ರಸನ್ನ, ಪರಿಮಳ ಪತ್ರಿಕೆಯ ಸಂಪಾದಕ ಜಿ.ಕೆ.ಆಚಾರ್ಯ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.