ಕೆರೆಗಳ ಭರ್ತಿಯಲ್ಲಿ ನಿರ್ಲಕ್ಷ್ಯ; ರಾಜ್ಯ ಸರ್ಕಾರದ ಸ್ವಯಂಕೃತ ಅಪರಾಧ: ಮುಖ್ಯಮಂತ್ರಿ ಚಂದ್ರು
Negligence in filling of lakes; State government's self-inflicted crime: mukhya Mantri Chandru
ಬೆಂಗಳೂರು:.ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ ಶೇ. 67ರಷ್ಟು ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ಕೃಷಿ ಚಟುವಟಿಕೆಗೆ ಪೂರಕವಾಗಿರುವ ಕೆರೆಗಳ ಭರ್ತಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿರುವುದು ಖಂಡನೀಯ. ಪೂರಕ ಮಳೆಯಾಗುತ್ತಿದ್ದರೂ ಭವಿಷ್ಯದ ದೃಷ್ಟಿಯಿಂದ ನೀರಿನ ಸದ್ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿರುವುದು ಸ್ವಯಂಕೃತ ಅಪರಾಧವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹರಿಹಾಯ್ದರು.
ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮುರಿದು ಹೋಗಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಇದೊಂದು ದುರದೃಷ್ಟಕರ ಘಟನೆಯಾಗಿದೆ. ಗೇಟ್ ಸರಿಪಡಿಸಲು 4-5 ದಿನಗಳು ಬೇಕು ಎನ್ನುತ್ತಿದ್ದಾರೆ. ಇದರಿಂದ ಸುಮಾರು 50-60 ಟಿಎಂಸಿ ನೀರು ಹರಿದುಹೋಗಲಿದೆ. ನೀರಿನ ಸಂಗ್ರಹ 45-50 ಟಿಎಂಸಿ ಅಡಿಗೆ ಇಳಿಯಲಿದೆ. ಕೃಷಿಕರ ಪಾಲಿಗೆ ಬಹುದೊಡ್ಡ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದೆಡೆ ಇಂತಹ ಅವಘಡಗಳಿಂದ ನಷ್ಟ ಸಂಭವಿಸಿದರೆ ಮತ್ತೊಂದೆಡೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ನಷ್ಟ ಸಂಭವಿಸುತ್ತಿದೆ. ಇಂತಹ ನಷ್ಟ ಸ್ವಾಗತಾರ್ಹವಲ್ಲ. ರಾಜ್ಯದಲ್ಲಿ ಒಟ್ಟು 41 ಸಾವಿರ ಕೆರೆಗಳಿವೆ. ಈ ಪೈಕಿ ಅತಿಹೆಚ್ಚು ಕೆರೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ ಇಲಾಖೆಗಳ ಸುಪರ್ದಿಯಲ್ಲಿವೆ. ನರೇಗಾ ಅಡಿಯಲ್ಲಿ ಅವುಗಳಲ್ಲಿ ಶೇಖರಣೆಯಾಗಿರುವ ಹೂಳು ತೆಗೆಯುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೂ ಶೇಕಡಾ 30ಕ್ಕಿಂತ ಹೆಚ್ಚಿನ ಕೆರೆಗಳು ಇನ್ನೂ ಶೇ 100ರಷ್ಟು ಭರ್ತಿಯಾಗಿಲ್ಲ. ಇದರರ್ಥ ನರೇಗಾ ಯೋಜನೆಯ ಕೆಲಸದ ದಿನಗಳಲ್ಲೂ ಗೋಲ್‌ಮಾಲ್ ನಡೆಸಲಾಗಿದೆಯೇ ಎಂಬ ಅನುಮಾನ ಕಾಡುತ್ತದೆ ಎಂದರು.
ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ ರಾಮನಗರ, ತುಮಕೂರು, ದಾವಣಗೆರೆ, ಕೊಪ್ಪಳ, ಗದಗ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಒಂದೂ ಕೆರೆ ಶೇ 100ರಷ್ಟು ಭರ್ತಿಯಾಗಿಲ್ಲ. ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿರುವ 3683 ಕೆರೆಗಳಿವೆ . ಒಟ್ಟು 107 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುತುವರ್ಜಿ ವಹಿಸಿದ್ದರೆ ಸುಮಾರು 4.40 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಪೂರೈಕೆ ಸಾಧ್ಯ. ಸುಮಾರು 1,195 ಕೆರೆಗಳು ಕೃಷಿ ಚಟುವಟಿಕೆಗೆ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸುತ್ತಿವೆ. ಇವುಗಳು ಭರ್ತಿಯಾಗದಿದ್ದರೆ ಅಷ್ಟು ಪ್ರಮಾಣದ ಕೃಷಿ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 500 ಕೆರೆಗಳಲ್ಲಿ ಹನಿ ನೀರಿಲ್ಲ. 8 ಜಿಲ್ಲೆಗಳಲ್ಲಿ ಒಂದೇ ಒಂದು ಕೆರೆಯೂ ತುಂಬಿಲ್ಲ. ಶೇ 67.55 ಕೆರೆಗಳಲ್ಲಿ ಇನ್ನೂ ಶೇ 50ಕ್ಕಿಂತ ಕಡಿಮೆ ನೀರಿದೆ. ಶೇ 15ರಷ್ಟು ಕೆರೆಗಳಲ್ಲಿ ಸ್ವಲ್ಪವೂ ನೀರು ಶೇಖರಣೆಯಾಗಿಲ್ಲ. ಇದು ಅತ್ಯಂತ ಕಳವಳಕಾರಿ ವಿಚಾರವಾಗಿದೆ.
ಬರಪೂರ ಮಳೆ ಬಂದರೂ ಬಿತ್ತನೆ ಮಾಡದೆ, ಬೆಳೆ ಬೆಳೆಯಲಾಗದೆ ಮೂರಾಬಟ್ಟೆಯಾಗಿರುವ ಕೃಷಿಕನ ಬದುಕನ್ನು ಹಸನು ಮಾಡುವ ಬದಲು ಆಳುವ ಮತ್ತು ವಿರೋಧ ಪಕ್ಷಗಳೆರಡು ಕ್ಷುಲ್ಲಕ ವಿಚಾರಗಳಿಗೆ ಇಡೀ ಸದನವನ್ನೇ ಬಲಿಕೊಟ್ಟು, ಊರ ತುಂಬಾ ಪಾದಯಾತ್ರೆ ಮಾಡಿಕೊಂಡು, ಪರಸ್ಪರ ವೈಯಕ್ತಿಕ ಕೆಸರೆರಚಾಡಿಕೊಂಡು ತಮ್ಮ ತಮ್ಮ ರಾಜಕೀಯ ಸ್ವಹಿತಾಸಕ್ತಿ ಗಳಿಗಾಗಿ ರಾಜ್ಯದ ರೈತನ ಜೀವನವನ್ನು ಆತ್ಮಹತ್ಯೆಯ ದಾರಿಗೆ ದೂಡುತ್ತಿರುವುದನ್ನು ಖಂಡಿಸಿ ಮಾತನಾಡಿದ ಚಂದ್ರು ಕೂಡಲೇ ಸರ್ಕಾರ ಹಾಗೂ ವಿಪಕ್ಷಗಳು ಇತ್ತ ಕಡೆ ಗಮನಹರಿಸಿ ಶಾಶ್ವತ ಯೋಜನೆಗಳನ್ನು ರೂಪಿಸುವ ಮೂಲಕ ರಾಜ್ಯದ ಕೃಷಿಕನ ಬದುಕನ್ನು ಹಸನು ಗೊಳಿಸಬೇಕೆಂದು ಆಗ್ರಹಿಸಿದರು.