ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ : ಸಚಿವ ಸಂತೋಷ್ ಲಾಡ್
Assembly approves Karnataka Labor Welfare Fund Amendment Bill: Minister Santosh Lad
ಬೆಳಗಾವಿ : ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ 2024 ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿತು.
ಕಲಾಪದ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರಸ್ತಾವವನ್ನು ಮಂಡಿಸಿದರು. ಇದಕ್ಕೆ ಅನುಮೋದನೆ ದೊರೆತ್ತಿದ್ದು, ಕಾರ್ಮಿಕರ ಕಲ್ಯಾಣಕ್ಕೆ ಅನುಕೂಲವಾಗುವ ಉಪಕ್ರಮವನ್ನು ಈ ಮಸೂದೆ ಒಳಗೊಂಡಿದೆ.
ಪ್ರಸ್ತಾವ ಮಂಡಿಸಿದ ನಂತರ ವಿವರ ನೀಡಿದ ಸಚಿವ ಲಾಡ್ ಅವರು, ಈ ತಿದ್ದುಪಡಿಯು ಈಗಾಗಲೇ ಇರುವ ಕಾಯ್ದೆಗೆ ತಿದ್ದುಪಡಿಯಾಗಿದ್ದು, ಐದನೇ ತಿದ್ದುಪಡಿಯಾಗಿದೆ. ಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ. ಸಮುದಾಯ ಭವನ, ಶೈಕ್ಷಣಿಕ ನೆರವು, ವೈದ್ಯಕೀಯ ನೆರವು, ಹೆರಿಗೆ ಭತ್ಯೆ, ಕ್ರೀಡಾ ಚಟುವಟಿಕೆಗೆ ಸಹಾಯ ಹೆಚ್ಚಳವಾಗಬೇಕು ಎಂದು ಹಲವು ಶಾಸಕರು ಬೇಡಿಕೆ ಇಟ್ಟಿದ್ದರು. ಈಗ ಉದ್ಯೋಗಿ, ಉದ್ಯೋಗದಾತ ಮತ್ತು ಸರ್ಕಾರದ ಪಾಲು ಹೆಚ್ಚಳವಾಗಿರುವುದರಿಂದ ಸಾಮಾಜಿಕ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರಾದ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು, ಇದೊಂದು ಉತ್ತಮ ಕ್ರಮ ಎಂದರು. ಅಸಂಘಟಿತ ಕಾರ್ಮಿಕರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಕುರಿತು ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಅವರು, ಸಚಿವ ಸಂತೋಷ್ ಲಾಡ್ ಅವರು ಹಲವು ಉದ್ದೇಶಗಳನ್ನು ಇಟ್ಟುಕೊಂಡು ಈ ತಿದ್ದುಪಡಿ ಪ್ರಸ್ತಾವ ಇಟ್ಟಿದ್ದಾರೆ. ಅವರಿಗೆ ಒಳ್ಳೆಯ ಆಲೋಚನೆಗಳಿವೆ. ಅವರಿಗೆ ಉದ್ಯಮದ ಬಗ್ಗೆ ಅರಿವಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ, ಶೈಲೇಂದ್ರ ಸೇರಿದಂತೆ ಹಲವು ಶಾಸಕರು ಕೆಲವು ಸಲಹೆಗಳನ್ನು ನೀಡಿದರು. ಅಡುಗೆ ಕಾರ್ಮಿಕರಿಗೆ ಸಹ ಸಾಮಾಜಿಕ ಸೌಲಭ್ಯಗಳನ್ನು ನೀಡಬೇಕು ಎಂದು ಸದಸ್ಯರೊಬ್ಬರು ತಿಳಿಸಿದರು.
ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸಚಿವ ಲಾಡ್ ಅವರು ವಿವರ ನೀಡಿದರು.