ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯ ಮತ್ತೆ ತುಂಬುವ ನಿರೀಕ್ಷೆ ರೈತರಿಗೆ ತೊಂದರೆಯಾಗದಂತೆ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ
As per the weather forecast, action should be taken so that the farmers are not disturbed when the Tungabhadra Reservoir fills again: Chief Minister Siddaramaiah
ಕೊಪ್ಪಳ: ಹವಾಮಾನ ಮುನ್ಸೂಚನೆಯಂತೆ ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದ್ದು, ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು ತುಂಗಭದ್ರಾ ಜಲಾಶಯದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ವಿಷಯವಲ್ಲ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ.. ಈ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ ಎಂದರು.
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 105 ಟಿಎಂಸಿ ನೀರು ತುಂಬಿತ್ತು. ಆದರೆ ತುಂಡಾಗಿರುವ ಗೇಟ್ ನ ದುರಸ್ತಿಗಾಗಿ 50 ರಿಂದ 60 ಟಿಎಂಸಿ ನೀರು ಹೊರಗೆ ಬಿಡಬೇಕಾಗಿದೆ. ಈ ವರ್ಷದ ಅಕ್ಟೋಬರ್ ವರೆಗೆ ಮಳೆಯಾಗಲಿದ್ದು, ಜಲಾಶಯದಲ್ಲಿ ಪುನ: ನೀರು ತುಂಬುವ ಸಾಧ್ಯತೆಯಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15 ರ ನಂತರ ಪುನ: ಮಳೆಬರುವ ನಿರೀಕ್ಷೆಯಿದೆ. ಆದ್ದರಿಂದ ಈಗ ಪೋಲಾಗಿರುವ ನೀರು ಮತ್ತೊಮ್ಮೆ ಜಲಾಶಯದಲ್ಲಿ ತುಂಬಲಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.