ರಾಜ್ಯದ ಉಂಡೆ ಕೊಬ್ಬರಿಗೆ ಸಂಬಂಧಪಟ್ಟಂತೆ ಸಚಿವ ವಿ ಸೋಮಣ್ಣರವರಿಂದ ಸಚಿವ ಶಿವರಾಜ ಸಿಂಗ್ ಚೌಹಾಣ್ ರವರಿಗೆ ಮನವಿ
ನವದೆಹಲಿ: ಇಂದು ನವದೆಹಲಿಯಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ ಸಿಂಗ್ ಚೌಹಾಣ್‌ರವರನ್ನು ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಭೇಟಿ ಮಾಡಿ, ರಾಜ್ಯದಲ್ಲಿ ಉಂಡೆ ಕೊಬ್ಬರಿಗೆ ಸಂಬಂಧಪಟ್ಟಂತೆ ನೆಪೆಡ್ ಸಂಸ್ಥೆಯಿಂದ ಪಾವತಿಸಬೇಕಾದ ರೂ.೬೯೧ ಕೋಟಿ ಹಣವನ್ನು ರಾಜ್ಯದ ಸಂಬಂಧಪಟ್ಟ ಖರೀದಿ ಎಜೆನ್ಸಿಗಳಿಗೆ ಮರು ಪಾವತಿಸಲು ಮನವಿಯನ್ನು ಸಲ್ಲಿಸಿದರು.
ಇದರಿಂದ ಕರ್ನಾಟಕ ರಾಜ್ಯದಲ್ಲಿ ತುಮಕೂರು, ಮಂಡ್ಯ, ಹಾಸನ, ಮೈಸೂರು, ಚಾಮರಾಜ ನಗರ, ಚಿತ್ರದುರ್ಗ, ಚಿಕ್ಮಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಗು ಬೆಳೆಯುವ ರೈತರ ಹಿತಾಶಕ್ತಿ ಕಾಪಾಡಲು ಅನುಕೂಲವಾಗುತ್ತದೆಯೆಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಕೇಂದ್ರ ಸಚಿವ ಸೋಮಣ್ಣನವರು ಮನವರಿಕೆ ಮಾಡಿ ಕೊಟ್ಟಿದ್ದಾರೆ.
ವಿಶೇಷವಾಗಿ ತುಮಕೂರು ಜಿಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಉಂಡೆ ಕೊಬ್ಬರಿ ಉತ್ಪಾದಕ ಜಿಲ್ಲೆಯಾಗಿದ್ದು, ಈ ಜಿಲ್ಲೆಯ ರೈತರಿಗೆ ಸಹಾಯ ಮಾಡುವಂತೆ ಕೇಂದ್ರ ಸಚಿವರು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ರಾಜ್ಯ ರೇಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಅತೀ ಶೀಘ್ರದಲ್ಲಿ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈಗಾಗಲೆ ೨೫೯೯ ಮೆಟ್ರಿಕ್ ಟನ್ ನಿಂದ ೧೦೫೦೦ ಮೆಟ್ರಿಕ್ ಟನ್ ಮಿಲ್ಲಿಂಗ್ ಕೊಪ್ರಾವನ್ನು ಬೆಂಬಲ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಅನುವು ಮಾಡಿಕೊಟ್ಟ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ರಾಜ್ಯದ ರೈತರ ಪರವಾಗಿ ಕೇಂದ್ರ ಸಚಿವರಾದ ಶ್ರೀ ಸೋಮಣ್ಣನವರು ಅಭಿನಂದನೆ ಸಲ್ಲಿಸಿದರು.