ನವೆಂಬರ್ 15ರಿಂದ ಕಬ್ಬು ಕ್ರಷಿಂಗ್ ಆರಂಭಿಸಲು ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಿಸ್ಮಾ ಸಭೆಯಲ್ಲಿ ನಿರ್ಣಯ
In South Indian sugar Mills association (SISMA) meeting it is decided to start sugarcane crushing from November 15
ಬೆಂಗಳೂರು: ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ನವಂಬರ್ 15ರಿಂದ ಕಬ್ಬು ನುರಿಸುವಿಕೆಯನ್ನು ಆರಂಭಿಸಲು ಗುರುವಾರ ವಿಕಾಸಸೌಧದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಸ್ಮಾ (ಸೌಥ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್) ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಿಸ್ಮಾ ಪದಾಧಿಕಾರಿಗಳ ಹಲವು ಬೇಡಿಕೆಗಳ ಬಗ್ಗೆ ಚರ್ಚಿಸಿದ ಸಚಿವರು ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದರು. ಕಬ್ಬು ನುರಿಸುವಿಕೆ ಆರಂಭದ ದಿನ ಹೊರತುಪಡಿಸಿ ಇತರ ಎಲ್ಲ ವಿಷಯಗಳು ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಅನ್ವಯವಾಗಲಿವೆ. ನೆರೆಯ ಮಹಾರಾಷ್ಟ್ರ ರಾಜ್ಯದ ಸಕ್ಕರೆ ಕಾರ್ಖಾನೆಗಳು ನವೆಂಬರ್ 15ಕ್ಕಿಂತ ಪೂರ್ವದಲ್ಲಿ ಕಬ್ಬು ನುರಿಸುವಿಕೆ ಆರಂಭ ಮಾಡಿದರೆ ಗಡಿಭಾಗದ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಮಹಾರಾಷ್ಟ್ರದಲ್ಲೂ ನವೆಂಬರ್ 15ರಿಂದಲೇ ಆರಂಭಿಸದರೆ ಸೂಕ್ತ ಎಂದು ಸಿಸ್ಮಾ ಪದಾಧಿಕಾರಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಶಿವಾನಂದ ಪಾಟೀಲ ಅವರು, ಪತ್ರವ್ಯವಹಾರ ಮಾಡುವ ಭರವಸೆ ನೀಡಿದರು.
ಕರ್ನಾಟಕದ ಕಬ್ಬು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆಯಾದರೆ ಇಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಇಲ್ಲಿನ ಕಬ್ಬು ಮಹಾರಾಷ್ಟ್ರಕ್ಕೆ ಪೂರೈಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿದರು.
ಆಯಾ ವರ್ಷದ ಸಕ್ಕರೆ ಇಳುವರಿ ಆಧರಿಸಿ ಕಬ್ಬಿಗೆ ಎಫ್ ಆರ್ ಪಿ (ನ್ಯಾಯಯುತ ಬೆಲೆ) ನಿಗದಿಪಡಿಸಬೇಕು ಎಂದು ಸಿಸ್ಮಾ ಪದಾಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು. ಬೆಲೆ ನಿಗದಿ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಪ್ರತಿ ವರ್ಷ ಕಬ್ಬಿನ ಎಫ್ ಆರ್ ಪಿ ಹೆಚ್ಚಳವಾಗಲಿದ್ದು, ಇದೇ ರೀತಿ ಸಕ್ಕರೆ ಮತ್ತು ಎಥೆನಾಲ್ ಮಾರಾಟಕ್ಕೂ ಕನಿಷ್ಟ ಬೆಲೆ ನಿಗದಿಪಡಿಸಬೇಕು ಎಂದು ಸಿಸ್ಮಾ ಪದಾಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು.
ಸಕ್ಕರೆ ದಾಸ್ತಾನಿಗೆ ಪ್ರತಿಶತ 20ರಷ್ಟು ಸೆಣಬಿನ ಚೀಲಗಳ ಬಳಕೆ ಕಡ್ಡಾಯ ಮಾಡಲಾಗಿದೆ. ಸೆಣಬಿನ ಚೀಲಗಳನ್ನು ಬಳಕೆ ಮಾಡಿದರೆ ಸಕ್ಕರೆ ಗುಣಮಟ್ಟ ಹಾಳಾಗಲಿದೆ. ಹಾಗೂ ತೇವಾಂಶದಿಂದ ಸಮಸ್ಯೆಯಾಗಲಿದೆ. ಸಕ್ಕರೆ ರಫ್ತು ಮಾಡಲೂ ಸಮಸ್ಯೆಯಾಗುತ್ತಿದ್ದು, ಸೆಣಬಿನ ಚೀಲಗಳ ಬಳಕೆ ಕಡ್ಡಾಯವನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ಸಿಸ್ಮಾದ ಎಲ್ಲ ಬೇಡಿಕೆಗಳ ಅನುಷ್ಟಾನಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಮುರುಗೇಶ ನಿರಾಣಿ, ಎಸ್.ಆರ್. ಪಾಟೀಲ, ಜಗದೀಶ ಗುಡಗುಂಟಿ, ಮಂಜುನಾಥ ಆರ್ ಕಬಾಡಿ, ಪ್ರಜ್ವಲ್ ಪಾಟೀಲ್, ಉದಯಕುಮಾರ ಪುರಾಣಿಕಮಠ, ಸಂತೋಷ್ ಮೆಳ್ಳಿಗೇರಿ, ಕೆ.ಎಂ. ಮಂಜಪ್ಪ, ವಾದಿರಾಜ್, ಶಶಿಕಾಂತ್ ನಾಯಕ್, ವಿನಯ್ ದೇಶಪಾಂಡೆ, ರಮೇಶ್ ಪಾಟೀಲ್, ಸರವಣನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.