ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ: ಬಿ ವೈ ವಿಜಯೇಂದ್ರ ಏನಂದ್ರು?

ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ: ಬಿ ವೈ ವಿಜಯೇಂದ್ರ ಏನಂದ್ರು?

ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ: ಬಿ ವೈ ವಿಜಯೇಂದ್ರ ಏನಂದ್ರು?
ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು, ಮಾರ್ಚ್‌ 25: ಗಾಲಿ ಜನಾರ್ದನ ರೆಡ್ಡಿ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮಾಡುವ ದೃಷ್ಟಿಯಿಂದ ಅವರು ಬಿಜೆಪಿ ಸೇರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೆಡ್ಡಿ ಅವರು ಈ ಮೂಲಕ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದರು. ಶ್ರೀಮತಿ ಅರುಣಲಕ್ಷ್ಮಿ, ಮಾಜಿ ಸಚಿವ ಟಿ.ಜಾನ್ ಅವರ ಪುತ್ರ ಡಾ.ಥಾಮಸ್ ಜಾನ್ ಅವರೂ ಬಿಜೆಪಿ ಸೇರಿದರು. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಕ್ಕೆ ಐತಿಹಾಸಿಕ ಗೆಲುವು ಖಚಿತ ಎಂದು ಹೇಳಿದರು.
   

ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ. ಮುಂದಿನ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸಲಿದೆ ಎಂದು ಅವರು ನುಡಿದರು. ಪಕ್ಷದ ಹಿತದೃಷ್ಟಿ, ಏಳಿಗೆಗಾಗಿ ಎಲ್ಲರನ್ನೂ ತೊಡಗಿಸಿಕೊಳ್ಳಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಸಾಧನೆಯ ಬ್ರಹ್ಮಾಸ್ತ್ರ ನಮ್ಮಲ್ಲಿದೆ. ಆ ಮೂಲಕ ಬಿಜೆಪಿ- ಜೆಡಿಎಸ್ ದಾಖಲೆಯ ಗೆಲುವು ಸಾಧಿಸಲು ಶ್ರಮಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕರೆನೀಡಿದರು.

ಸಕಾರಾತ್ಮಕ ಅಂಶಗಳನ್ನು ಜನರ ಮುಂದಿಡಿ. ಬಡವರು, ರೈತರು, ಮಹಿಳೆಯರು, ಯುವಜನತೆ ಎಂಬ 4 ವರ್ಗಗಳ ಜನರನ್ನು ನಾವು ತಲುಪಿ ಮೋದಿಯವರ ಸಾಧನೆಗಳನ್ನು ತಲುಪಿಸಬೇಕಿದೆ ಎಂದು ನುಡಿದರು. ಕರ್ನಾಟಕ ರಾಜ್ಯವು ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬುದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರುಜುವಾತು ಮಾಡಬೇಕಿದೆ; ಇದಕ್ಕಾಗಿ ನಮ್ಮೆಲ್ಲರ ಶ್ರಮ ಅತ್ಯಗತ್ಯ ಎಂದು ತಿಳಿಸಿದರು.

ಮುಂದಿನ ಲೋಕಸಭಾ ಚುನಾವಣೆಯು ಈ ದೇಶದ ಭವಿಷ್ಯವನ್ನು ರೂಪಿಸಲಿದೆ. ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಗ್ಗಟ್ಟಾಗಿ ಶ್ರಮ ಹಾಕಿ ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸುವ ಚುನಾವಣೆ ಇದು ಎಂದು ಹೇಳಿದರು.

ದೇಶದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಈ ದೇಶದ ವಿರೋಧ ಪಕ್ಷಗಳು ಈಗಾಗಲೇ ತೀರ್ಮಾನ ಮಾಡಿವೆ. ಆದರೂ, ನಾವು ಚುನಾವಣೆಯನ್ನು ಸವಾಲಾಗಿ, ಗಂಭೀರವಾಗಿ ಸ್ವೀಕರಿಸಬೇಕು ಎಂದು ಅವರು ತಿಳಿಸಿದರು. ಎಲ್ಲ 58 ಸಾವಿರ ಬೂತ್‍ಗಳನ್ನು ನೇರವಾಗಿ ತಲುಪಬೇಕಿದೆ. ನರೇಂದ್ರ ಮೋದಿಯವರ ಜನಪ್ರಿಯತೆ, ಜನಪರ ಯೋಜನೆಗಳನ್ನು ಮತವಾಗಿ ಪರಿವರ್ತಿಸುವ ಸವಾಲನ್ನು ಸ್ವೀಕರಿಸಿ ಎಂದು ಅವರು ಮನವಿ ಮಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅಧಿಕಾರ ಪಡೆದಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ತಪ್ಪು ನರೇಟಿವ್ ಅನ್ನು ಕಾಂಗ್ರೆಸ್ ಪಕ್ಷ ಮುಂದಿಟ್ಟಿತ್ತು ಎಂದರು. ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನ ಮಾಡಿದ್ದೇವೆ. ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು, ಬೆಂಬಲಿಗರು ಯಡಿಯೂರಪ್ಪ ಅವರ ಆಶೀರ್ವಾದ, ವಿಜಯೇಂದ್ರರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ ಎಂದು ತಿಳಿಸಿದರು.

ದೇಶದ ಸಮಗ್ರತೆ, ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಾಗಿ ಭಾರತವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಿದ ನರೇಂದ್ರ ಮೋದಿಜೀ ಅವರ ಕೈಯನ್ನು ಬಲಪಡಿಸಲು ಬಿಜೆಪಿ ಸೇರಿದ್ದೇನೆ. ಅಮಿತ್ ಶಾ ಜೀ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿದ್ದರು ಹಾಗೂ ಬಿಜೆಪಿಗೆ ಸೇರಲು ತಿಳಿಸಿದ್ದಾರೆ. ಅದರಂತೆ ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು. ಮಾನ್ಯ ಯಡಿಯೂರಪ್ಪ ಅವರು ನನಗೆ ಸಚಿವನಾಗಲು ಅತಿ ಚಿಕ್ಕ ವಯಸ್ಸಿನಲ್ಲೇ ಅವಕಾಶ ಕೊಟ್ಟಿದ್ದರು. ಬಿಜೆಪಿ ಕಟ್ಟುವ ಅನುಭವ ನನಗಾಯಿತು. ಯಡಿಯೂರಪ್ಪ ಅವರ ಪುತ್ರರೇ ರಾಜ್ಯಾಧ್ಯಕ್ಷನಾಗಿರುವ ಸಂದರ್ಭದಲ್ಲಿ ಪಕ್ಷ ಸೇರಿ ಮತ್ತೆ ಕೆಲಸ ಮಾಡುವ ಅವಕಾಶ ಸಿಗುತ್ತಿದೆ ಎಂದರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಬಿಜೆಪಿ ಸೇರುತ್ತಿದ್ದೇನೆ. ಪಕ್ಷ ಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ. ಮನೆಗೆ ಮತ್ತೆ ಬಂದಂತೆ ಭಾಸವಾಗುತ್ತಿದೆ. ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇತ್ತು. ಪಕ್ಷವೆಂಬ ತಾಯಿಯ ಮಡಿಲಿಗೆ ಕ್ಷೇಮವಾಗಿ ಸೇರಿದ್ದೇನೆ ಎಂದು ತಿಳಿಸಿದರು.