ವಿಭೂತಿ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ
Tourist are prohibited in vibhuti falls
ಉತ್ತರ ಕನ್ನಡ: ಅಂಕೋಲ ತಾಲೂಕಿನ ಅಚವೆ ಗ್ರಾಮದಲ್ಲಿರುವ ಪ್ರಸಿದ್ಧ ವಿಭೂತಿ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ವಿಭೂತಿ ಜಲಪಾತ ತುಂಬಿ ಹರಿಯುತ್ತಿದೆ. ಇದರಿಂದ ಪ್ರತಿ ಕ್ಷಣದಲ್ಲಿ ನೀರಿನ ಪ್ರಮಾಣ ಸಹ ಏರಿಳಿತವಾಗುತ್ತಿದ್ದು, ಹರಿದು ಬರುವ ನೀರಿನಲ್ಲಿ ವಿಷಜಂತುಗಳು, ಮರದ ದಿಮ್ಮಿಗಳು ತೇಲಿಬರುತ್ತಿವೆ. ಅಪಾಯವಿರುವುದರಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ.
ವಿಭೂತಿ ಜಲಪಾತ ಬೀಳುವ ಸ್ಥಳವು ಸುಣ್ಣದ ರೂಪದ ಕಲ್ಲುಗಳಿಂದ ಕೂಡಿದ್ದು ಸುತ್ತಲೂ ಅರಣ್ಯ ಗುಡ್ಡವನ್ನು ಹೊಂದಿದೆ. ಜಲಪಾತ 30 ಅಡಿ ಎತ್ತರದಲ್ಲಿದೆ. ಪಕ್ಕದಲ್ಲೇ ವಿಶ್ವ ಪ್ರಸಿದ್ಧ ಯಾಣ ಸಹ ಇದೆ. ಇದೇ ಭಾಗದಲ್ಲಿ ಸಹ ಸುಣ್ಣದ ಕಲ್ಲುಗಳಿದ್ದು, ಇವುಗಳ ಮೂಲಕ ಹರಿದುಬರುವುದರಿಂದ ಈ ಜಲಪಾತಕ್ಕೆ ವಿಭೂತಿ ಜಲಪಾತ ಎಂದು ಹೆಸರು ಬಂದಿದೆ.
ಪ್ರತಿ ಮಳೆಗಾಲದಲ್ಲಿ ಬಂದ್ ಇರುತ್ತಿದ್ದು, ಅಕ್ಟೋಬರ್ ತಿಂಗಳ ನಂತರ ಈ ಜಲಪಾತ ನೋಡಬಹುದಾಗಿದೆ. ಜೊತೆಗೆ ಪಕ್ಕದಲ್ಲೇ ಯಾಣ ಸಹ ಇರುವುದರಿಂದ ಕರಾವಳಿ ಪ್ರವಾಸ ಮಾಡುವವರು ಈ ಭಾಗಕ್ಕೆ ಬಂದು ಹೋಗಬಹುದಾಗಿದೆ. ಗೋಕರ್ಣದಿಂದ ನೇರವಾಗಿ ಇಲ್ಲಿಗೆ ಬರಲು ಉತ್ತಮ ರಸ್ತೆಗಳಿವೆ. ಸದ್ಯ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದು, ಮಳೆ ಇಳಿಕೆಯಾದ ನಂತರ ಎಂದಿನಂತೆ ಜನರಿಗೆ ಪ್ರವೇಶ ದೊರೆಯಲಿದೆ.