AAP: ಕೂಡಲೇ ಬಿಎಂಟಿಸಿ ಚಾಲಕರಿಗೆ ವೇತನ ಪಾವತಿಸಿ: ಎಎಪಿ ಆಗ್ರಹ

ಬೆಂಗಳೂರು: ರಾಜಧಾನಿಗೆ ಎಲೆಕ್ಟ್ರಿಕ್ ಬಸ್ ಗಳ ಅಗತ್ಯವಿದೆ. ಆದರೆ ಇ-ಬಸ್ ಗಳ ನೆಪದಲ್ಲಿ ಬಿಎಂಟಿಸಿ ಸಂಸ್ಥೆಯನ್ನೇ ಖಾಸಗಿಕರಣಗೊಳಿಸುವುದಕ್ಕೆ ತೀವ್ರ ವಿರೋಧವಿದೆ. ಪ್ರಯಾಣಿಕರು, ಚಾಲಕರು ಹಾಗೂ ನಿರ್ವಾಹಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಕಾರ್ಯನಿರ್ವಹಿಸಬೇಕೇ ವಿನಃ ಇಲೆಕ್ಟ್ರಿಕ್ ಬಸ್ ಪೂರೈಸಿದ ಕಂಪನಿಗಳಿಗೆ ಲಾಭ ಮಾಡಿಕೊಡುವುದಕ್ಕಲ್ಲ. ಈ ಕೂಡಲೇ ಗುತ್ತಿಗೆ ಕಂಪನಿಗಳು ಚಾಲಕರಿಗೆ ವೇತನ ಪಾವತಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಜಗದೀಶ್ ವಿ. ಸದಂ ಆಗ್ರಹ ಪಡಿಸಿದರು.
ಬೆಂಗಳೂರು ನಗರಕ್ಕೆ ಸುಮಾರು 600 ಇ-ಬಸ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. 3 ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಆದರೆ ಈ ಒಪ್ಪಂದದಲ್ಲಿ ಚಾಲಕರು ಮತ್ತು ನಿರ್ವಾಹಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಸ್ ಪೂರೈಸಿದ ಸಂಸ್ಥೆಗಳೇ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ನಿರ್ವಾಹಕರ ಹುದ್ದೆಗಳನ್ನು ಸಂಪೂರ್ಣ ಕಡಿತಗೊಳಿಸುತ್ತಿದೆ. ಸಂಬಳ ವಿಚಾರದಲ್ಲೂ ಚಾಲಕರಿಗೆ ಭದ್ರತೆ ಇಲ್ಲವಾಗಿದೆ. ಈಗಾಗಲೇ 136 ಬಸ್ ಗಳನ್ನು ಖಾಸಗಿ ಸಂಸ್ಥೆಯಿಂದ ಪಡೆದುಕೊಳ್ಳಲಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ಖಾಸಗಿ ಸಂಸ್ಥೆಯೇ ನಿರ್ವಹಿಸುತ್ತಿದೆ. ಕಳೆದ 3 ತಿಂಗಳಿಂದ ಚಾಲಕರಿಗೆ ವೇತನ ನೀಡಿಲ್ಲ. ಕೆಲವು ಚಾಲಕರಿಗೆ ಕೊಟ್ಟಿರುವ ವೇತನದಲ್ಲೂ ನಿಗದಿಗಿಂತ ಕಡಿಮೆ ಕೊಡಲಾಗಿದೆ. ಅಲ್ಲದೆ ಈ ಕಂಪನಿಗಳು ಕಾರ್ಮಿಕರ ಭವಿಷ್ಯ ನಿಧಿ ಹಣವನ್ನು ಸಹ ಪಾವತಿಸದೆ ಮೋಸ ಮಾಡುತ್ತಿವೆ. ತಕ್ಷಣ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.
Advertisement
ಜಾಹೀರಾತಿಗಾಗಿ ಸಂಪರ್ಕಿಸಿ 6362546216
ಚಾಲಕರಿಗೆ ಕೊಡಲಾಗುತ್ತಿರುವ ವೇತನವೇ ಕನಿಷ್ಠ ಪ್ರಮಾಣದ್ದಾಗಿದೆ. ಅದರಲ್ಲೂ ಕಡಿತ ಮಾಡಿಕೊಡಲಾಗುತ್ತಿದೆ. ಜೊತೆಗೆ ಗ್ಲಾಸ್, ಕಿಟಕಿ ಮತ್ತಿತರ ವಸ್ತುಗಳಿಗೆ ಹಾನಿಯಾದರೆ ಚಾಲಕರ ಸಂಬಳದಿಂದಲೇ ದಂಡ ಪಾವತಿ ಮಾಡಿಕೊಳ್ಳಲಾಗುತ್ತಿದೆ. ಬಿಎಂಟಿಸಿ ಘಟಕದ ಬಸ್ ಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುತ್ತಿರುವುದು ಸರಿಯಲ್ಲ. ಇ-ಬಸ್ ಖರೀದಿಗೆ ಕೇಂದ್ರದಿಂದ ಸಾಕಷ್ಟು ಅನುದಾನ ಸಿಗುತ್ತಿದ್ದರೂ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು ಆಕ್ಷೇಪಾರ್ಹ. ಕಂಪನಿಗಳಿಂದ ಎಲೆಕ್ಟ್ರಿಕ್ ಬಸ್ ಗಳನ್ನು ಬಿಎಂಟಿಸಿ ಸಂಸ್ಥೆ ನೇರವಾಗಿ ಖರೀದಿಸಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.