ಜಾಗತಿಕ ಬೇಸಿಕ್ ಆದಾಯ ಹೆಚ್ಚಳ ಪರಿಕಲ್ಪನೆಗೆ ರಾಜ್ಯದಿಂದ ಅತಿದೊಡ್ಡ ಪ್ರಮಾಣದ ಕೊಡುಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಾಡಿನ ಸಮಸ್ತ ಜನರ ಬದುಕಿಗೆ ಆರ್ಥಿಕ ಭದ್ರತೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಜಾಗತಿಕ ಮೂಲ ಆದಾಯ (ಯುನಿವರ್ಸಲ್ ಬೇಸಿಕ್ ಇನ್‌ಕಮ್) ಪರಿಕಲ್ಪನೆಯನ್ನು ಅತಿದೊಡ್ಡ ಪ್ರಮಾಣದಲ್ಲಿ ಸಾಕಾರಗೊಳಿಸುತ್ತಿರುವ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯವಾಗಿದೆ.ಈ ಯೋಜನೆಗಳು ಮುಂದುವರಿಯಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕರ್ನಾಟಕ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ,ಬೆಂಗಳೂರು ನಗರ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ,ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು,
ಗೃಹಲಕ್ಷ್ಮಿ,ಶಕ್ತಿ,ಗೃಹಜ್ಯೋತಿ,ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿಯುತ್ತಿರುವವರಿಗೆ ರಾಜ್ಯದಲ್ಲಿ ಆರ್ಥಿಕ ಪ್ರಗತಿ ಪ್ರಗತಿ ಸಾಧಿಸಿ ತೋರಿಸುವ ಮೂಲಕ ನಾವು ಉತ್ತರ ನೀಡಲಿದ್ದೇವೆ.ಹೊಸ ಅವಿಷ್ಕಾರಗಳನ್ನು ನಡೆಸಿ ಅವು ಫಲಾನುಭವಿಗಳಿಗೆ ಇನ್ನಷ್ಟು ಹೆಚ್ಚು ನೆರವಾಗುವ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಉದ್ಯುಕ್ತವಾಗಿದೆ ಎಂದರು.
ಜಾಹೀರಾತು / advertisement
ಶಕ್ತಿ ಯೋಜನೆಯಡಿ ಮಹಿಳೆಯರು 270 ಕೋಟಿ ಟ್ರಿಪ್ ಉಚಿತ ಪ್ರಯಾಣ ಸೌಲಭ್ಯ ಪಡೆದಿದ್ದಾರೆ. ಮಹಿಳೆಯರು 6541 ಕೋಟಿ ರೂ.ಗಳಷ್ಟು ಪ್ರಯಾಣ ವೆಚ್ಚ ಉಳಿತಾಯ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರದ ಅಸಹಕಾರದಿಂದಾಗಿ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಜನಕಲ್ಯಾಣ ಯೋಜನೆಗಳು ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ,ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡುವ ವಿವಿಧ ಯೋಜನೆಗಳಡಿ 13,027 ಕೋಟಿ ರೂ.ವೆಚ್ಚ ಮಾಡಲಾಗಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಮುಂಗಾರು ಹಂಗಾಮುಗಳಲ್ಲಿ ರಾಜ್ಯ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಿದೆ.ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೆ,ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ.ಕೇಂದ್ರ ಸರ್ಕಾರ ಬರಪರಿಹಾರ ಮೊತ್ತವನ್ನು ತಡವಾಗಿ ನೀಡಿದರೂ ಸಹ ರಾಜ್ಯದಲ್ಲಿ ಬರದಿಂದ ಜನರಿಗೆ ಹೆಚ್ಚು ಅನಾನುಕೂಲಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.ಪ್ರಸಕ್ತ ಸಾಲಿನಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ.ಜೀವಹಾನಿ,ಜಾನುವಾರುಗಳ ಸಾವು ಹಾಗೂ ಮನೆ ಹಾನಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ.ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ.ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ ಎಂಬ ಪ್ರಕೃತಿಯ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೂಲಕ 5 ಸಾವಿರ ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ,ದಾಸೋಹ ಮತ್ತು ಸಮ ಸಮಾಜ ನಿರ್ಮಾಣದ ತತ್ವಗಳು ಸಂವಿಧಾನದ ಮೂಲಭೂತ ಆಶಯಗಳಾಗಿವೆ.ಈ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗೆ ವಿಶೇಷ ಆದ್ಯತೆ ನೀಡಿ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಸರ್ಕಾರದ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.