ರೈತರ ಜಮೀನು ಸಂಪೂರ್ಣ ಸುರಕ್ಷಿತ : ಎಂ‌ ಬಿ ಪಾಟೀಲ

Farmer's land is completely safe: MB Patil

ರೈತರ ಜಮೀನು ಸಂಪೂರ್ಣ ಸುರಕ್ಷಿತ : ಎಂ‌ ಬಿ ಪಾಟೀಲ
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ಬೆಂಗಳೂರು: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ವಕ್ಫ್ ಆಸ್ತಿಯೆಂದು ಯಾವ ರೈತರಿಗೂ ನೋಟೀಸ್ ಕೊಟ್ಟಿಲ್ಲ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಈ ವಿಚಾರದಲ್ಲಿ ಬಿಜೆಪಿ ಬೇಕೆಂದೇ ರಾಜಕೀಯ ಮಾಡಿ, ಇದನ್ನು ವಿವಾದ ಮಾಡುತ್ತಿದೆ ಎಂದು ಸರಕಾರದ ಪರವಾಗಿ ಸಚಿವ ಎಂ.ಬಿ. ಪಾಟೀಲ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಈ ಸಂಬಂಧ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೃಷ್ಣ ಬೈರೇಗೌಡ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಒಂದು ಕಾಲಕ್ಕೆ 14,201.32 ಎಕರೆ ವಕ್ಫ್ ಮಂಡಳಿಯದಾಗಿತ್ತು. ಈ ಪೈಕಿ ಭೂ ಸುಧಾರಣಾ ಕಾಯ್ದೆಯಡಿ 11,835.29 ಎಕರೆ ಮತ್ತು ಇನಾಂ ರದ್ದತಿ ಕಾಯ್ದೆಯಡಿ 1,459.26 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. 137 ಎಕರೆಯನ್ನು ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮಿಕ್ಕ 773 ಎಕರೆ ಮಾತ್ರ ವಕ್ಫ್ ಸಂಸ್ಥೆಗಳ ಅಡಿಯಲ್ಲಿದೆ. ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ರೈತರಿಗೆ ವಕ್ಫ್ ಆಸ್ತಿಯೆಂದು ಯಾವುದೇ ನೊಟೀಸ್ ನೀಡಿಲ್ಲ. ಈ ಸಂಬಂಧ ಸಚಿವ ಎಂ ಬಿ ಪಾಟೀಲ ಅವರೂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

1974ರ ಗೆಜೆಟ್ ಅಧಿಸೂಚನೆಯಲ್ಲಿ ವಿಜಯಪುರದ ಮಹಾಲಬಾಗಾಯತದ ಪಕ್ಕದಲ್ಲಿ ಬ್ರ್ಯಾಕೆಟ್ ಒಳಗೆ ವಕ್ಫ್ ಆಸ್ತಿಯಡಿಯಲ್ಲಿ ಹೊನವಾಡ ಎಂದು ತಪ್ಪಾಗಿ ನಮೂದಿಸಲಾಗಿತ್ತು.1977ರಲ್ಲಿ ವಕ್ಫ್ ಮಂಡಳಿಯೇ ತನ್ನ ತಪ್ಪನ್ನು ಸರಿಪಡಿಸಿದೆ. ಇದು ವಿವಾದವೇ ಅಲ್ಲ. ಬಿಜೆಪಿಯಲ್ಲಿ ವಿಜಯೇಂದ್ರ ಮತ್ತು ಬಸವರಾಜ ಪಾಟೀಲ ಯತ್ನಾಳ ನಡುವೆ ನಡೆಯುತ್ತಿರುವ ತಿಕ್ಕಾಟದಿಂದ ಇದು ರಾಜಕೀಯ ಬಣ್ಣ ಪಡೆದುಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇಂಡಿ ತಾಲ್ಲೂಕಿನಲ್ಲಿ ಮಾತ್ರ ಅಲ್ಲಿಯ ತಹಸೀಲ್ದಾರರು ಯಾವುದೇ ನೋಟೀಸ್ ನೀಡದೆ, 41 ಆಸ್ತಿಗಳನ್ನು ಇಂದೀಕರಣ ಮಾಡಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈತರು 1974ಕ್ಕಿಂತ ಮೊದಲಿನ ದಾಖಲೆ ಕೊಟ್ಟರೆ ಅಂತಹ ಆಸ್ತಿಗಳನ್ನು ವಕ್ಫ್ ಅಧಿಸೂಚನೆಯಿಂದ ಕೈಬಿಡಲಾಗುವುದು. ಬಾಧಿತ ರೈತರು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ, ಅವರು ಪರಿಶೀಲಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸಚಿವ ಪಾಟೀಲ, `ಈ ಪ್ರಕರಣ ಕುರಿತು ವಿಚಾರಣೆ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ವಿಜಯಪುರ ಪ್ರಕರಣದಲ್ಲಿ 1964ರಿಂದ 1973ರವರೆಗಿನ ಕಂದಾಯ ಮತ್ತು ವಕ್ಫ್ ದಾಖಲೆಗಳನ್ನು ತೌಲನಿಕವಾಗಿ ಪರಿಶೀಲಿಸಲು ಆದೇಶ ನೀಡಲಾಗಿದೆ’ ಎಂದರು.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಜನರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಬಿಜೆಪಿ ಮುಖಂಡರಿಂದ ಆಗುತ್ತಿದೆ. ಇದರಲ್ಲಿ ಧ್ರುವೀಕರಣದ ಸಂಚಿದೆ. ಸತ್ಯ ಶೋಧನೆಗೆ ಬಿಜೆಪಿ ಸಮಿತಿ ಬಂದರೆ ಕಾಫಿ- ಟೀ ಕೊಟ್ಟು ಪೂರ್ಣ ಮಾಹಿತಿ ನೀಡಲು ಜಿಲ್ಲಾಡಳಿತಕ್ಕೂ ಸೂಚಿಸಲಾಗಿದೆ‌ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಕ್ಫ್ ಸಚಿವ ಜಮೀರ್ ಅಹಮದ್ ಮಾತನಾಡಿ, `ನಮಗೆ ರೈತರ ಯಾವ ಜಮೀನೂ ಬೇಡ. ನಾನೂ ರೈತನ ಮಗನೇ. ವಕ್ಫ್ ಆಸ್ತಿಗೆ ಇಂದೀಕರಣ ಮಾಡಿಕೊಡಿ ಎಂದಷ್ಟೇ ಕೇಳಿರುವುದು.‌ ಇಷ್ಟಕ್ಕೂ ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಮಂಡಳಿಯದೇ ವಿನಾ 1,200 ಎಕರೆ ಅಲ್ಲ. ಅದೆಲ್ಲ‌ ರೈತರದೇ ಆಗಿದೆ ಎಂದೂ ಸ್ಪಷ್ಟಪಡಿಸಿದರು.

ವಿಜಯಪುರದಲ್ಲಿ 1,345 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಇದು ಯಾರಿಗೂ ಅಧಿಕೃತವಾಗಿ ಹಂಚಿಕೆ ಆಗಿಲ್ಲ. ಇದರಲ್ಲಿಯೂ ಸುಮಾರು 26 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಕೋರ್ಟ್ ನಲ್ಲಿದೆ. ಇದು ಬಿಟ್ಟರೂ 1,319 ಎಕರೆ ವಕ್ಪ್ ಆಸ್ತಿ ಅಕ್ರಮವಾಗಿ ಬೇರೆ ವ್ಯಕ್ತಿ/ಸಂಸ್ಥೆಗಳ ವಶದಲ್ಲಿ ಇದ್ದು ಅದನ್ನು ಸರಿ‌ ಮಾಡಿಕೊಡಲು ಕೇಳಲಾಗಿದೆ. ಇದು ಬಿಟ್ಟರೆ ನಮಗೆ ಬೇರೆ ಯಾರ ಆಸ್ತಿಯೂ‌ ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ವಿಜಯಪುರದಲ್ಲಿ ವಕ್ಫ್ ಅದಾಲತ್ ನಡೆಸಿದಾಗ ಅಲ್ಲಿನ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರಿಗೂ ಆಹ್ವಾನ ನೀಡಲಾಗಿತ್ತು. ಅಂದು ಸಭೆಗೆ ಬಾರದ ಅವರು ಈಗ ಬೇಕೆಂದೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.