ಯಲಹಂಕ ಹಾಗೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಕುಡಿಯು ನೀರಿಗೆ ಸಂಬಂಧಿಸಿದಂತೆ ಸಭೆ
ಬೆಂಗಳೂರು: ನಗರದ ಯಲಹಂಕ ಹಾಗೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ನಾಗರೀಕರಿಗೆ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು *ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್* ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಯಲಹಂಕ ಹಾಗೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ಅಧಿಕಾರಿಗಳು ಜಲಮಂಡಳಿ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ನೀರಿನ ಸಮಸ್ಯೆಯಿರುವ ಕಡೆ ಕೂಡಲೆ ನೀರಿನ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುದ್ಧ ಕುಡಿಯುವ ನೀರಿನ ಘಟಕ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ನೀರಿನ ಕೊರತೆಯಿರುವ ಘಟಕಗಳಿಗೆ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಿಕೊಂಡು ನೀರಿನ ಪೂರೈಕೆ ಮಾಡಲು ಸೂಚಿಸಿದರು. ಜೊತೆಗೆ ನೀರಿನ ಅಭಾವ ಹೆಚ್ಚಿರುವ ಕಡೆ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿ ನೀರಿನ ಪೂರೈಕೆ ಮಾಡಬೇಕೆಂದು ಸೂಚಿಸಿದರು.
ಎರಡೂ ವಲಯಗಳಿಗೆ ಕೊಳವೆ ಬಾವಿಗಳ ನಿರ್ವಹಣೆ, ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಈಗಾಗಲೇ ಅನುದಾನವನ್ನು ನೀಡಲಾಗಿದ್ದು, ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ರೀ ಡ್ರಿಲ್ ಮಾಡುವುದು ಹಾಗೂ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದರು.
ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿ ನಿಯೋಜನೆ ಮಾಡಿರುವ ಟ್ಯಾಂಕರ್ ಗಳು ಎಷ್ಟು ಬಾರಿ ನೀರಿನ ಪೂರೈಕೆ ಮಾಡಲಿವೆ ಎಂಬುದನ್ನು ಮೇಲ್ವಿಚಾರಣೆ ಮಾಡಬೇಕೆಂದು ಸೂಚಿಸಿದರು.
ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿರುವ ಪಂಪ್ ಸೆಟ್ ಗಳನ್ನು ಹೊರತೆಗೆದು ಯಾವುದಾದರು ಯಂತ್ರ ಹಾಳಾಗಿರುವ ಸ್ಥಿತಿಯಲ್ಲಿದ್ದರೆ ಅದನ್ನು ದುರಸ್ತಿಪಡಿಸಿಕೊಂಡು ಒಂದು ಕಡೆ ಸಂಗ್ರಸಿಟ್ಟುಕೊಳ್ಳಬೇಕು. ಯಾವುದಾದರು ಕೊಳವೆ ಬಾವಿಯಲ್ಲಿ ಪಂಪ್ ಸೆಟ್ ಹಾಳಾದಲ್ಲಿ ಕೂಡಲೆ ಸಂಗ್ರಹಿಸಿಟ್ಟಿರುವ ಯಂತ್ರಗಳನ್ನು ಕೊಳವೆ ಬಾವಿಗೆ ಅಳವಡಿಸಿ ನೀರಿನ ಪೂರೈಕೆ ಮಾಡಬೇಕೆಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳ ಪೈಕಿ ಯಲಹಂಕ ವಕಯಕ್ಕೆ 16 ಹಳ್ಳಿ ಹಾಗೂ ದಾಸರಹಳ್ಳಿ ವಲಯಕ್ಕೆ 05 ಬರಲಿವೆ. ಸದರಿ ಹಳ್ಳಿಗಳಿಗೆ ಪಾಲಿಕೆಯಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಮಳೆಗಾಲ ಪ್ರಾರಂಭವಾಗುವವರೆಗೆ ಎಲ್ಲಿಯೂ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ಕರೀ ಗೌಡ, ಪ್ರೀತಿ ಗೆಹ್ಲೋಟ್, ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಬಾಲಶೇಖರ್, ಮುಖ್ಯ ಅಭಿಯಂತರರಾದ ರಂಗನಾಥ, ರವಿ, ಕಾರ್ಯಪಾಲಕ ಅಭಿಯಂತರರು, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.