ಕೇಂದ್ರದಿಂದ ಖನಿಜ ಸಮೃದ್ಧ ಭೂಮಿ ಮೇಲಿನ ರಾಯಧನದ ಹಿಂದಿನ ಬಾಕಿ ಪಡೆಯುವಂತೆ ಸಿಎಂ ಸಿದ್ದರಾಮಯ್ಯಗೆ ಎಎಪಿ ಪತ್ರ
AAP letter to CM Siddaramaiah asking Center to recover arrears of royalty on mineral rich land
ಬೆಂಗಳೂರು: ಜಾರ್ಖಂಡ್ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಖನಿಜ ಸಮೃದ್ಧ ಭೂಮಿ ಮೇಲಿನ ರಾಯಧನದ ಹಿಂದಿನ ಬಾಕಿ ಪಡೆಯುವಂತೆ ಸಿಎಂ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಪತ್ರ ಬರೆದಿದ್ದಾರೆ.
2005 ಏಪ್ರಿಲ್ 1ರ ನಂತರ ಕೇಂದ್ರ ಸರ್ಕಾರ ಮತ್ತು ಗಣಿ ಕಂಪನಿಗಳಿಂದ ಖನಿಜ ಸಮೃದ್ಧ ಭೂಮಿ ಮೇಲಿನ ರಾಯಧನದ ಹಿಂದಿನ ಬಾಕಿಯನ್ನು ವಸೂಲಿ ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಅನುಮತಿ ನೀಡಿರುವುದು ಕರ್ನಾಟಕದ ಪಾಲಿಗೆ ವರದಾನವಾಗಿದೆ. ಕೇಂದ್ರ ಮತ್ತು ಗಣಿ ಕಂಪನಿಗಳು ಮುಂದಿನ 12 ವರ್ಷಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಖನಿಜ ಸಮೃದ್ಧ ರಾಜ್ಯಗಳಿಗೆ ಬಾಕಿ ಪಾವತಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಇದರಿಂದ ರಾಜ್ಯಕ್ಕೆ ಭಾರಿ ಮೊತ್ತದ ಬಾಕಿ ರಾಯಧನ ಸಿಗಲಿದೆ. ಈ ಬಾಕಿ ಹಣವನ್ನು ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಪ್ರವೃತ್ತರಾಗಬೇಕು. ರಾಜ್ಯದ ಅಭಿವೃದ್ಧಿಗೆ, ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದ್ದಾರೆ.
ಉಚ್ಛ ನ್ಯಾಯಾಲಯದ ಮಹತ್ವದ ತೀರ್ಪಿನ ನಂತರ ಜಾರ್ಖಂಡ್‌ಗೆ 1.36 ಲಕ್ಷ ಕೋಟಿ ರೂಪಾಯಿ ಬಾಕಿ ಬರಲಿದೆ. ಈ ಹಣದಲ್ಲಿ ಜಾರ್ಖಂಡ್ ಅಭಿವೃದ್ಧಿ ಹಾಗೂ ರಾಜ್ಯದ ಕಲ್ಯಾಣಕ್ಕೆ ವಿನಿಯೋಗಿಸುವುದಗಿ ಅಲ್ಲಿನ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ. ಇದೇ ಮಾದರಿಯಲ್ಲಿ ಕರ್ನಾಟಕದ ಪಾಲಿಗೆ ಬರಬೇಕಿರುವ ಮೊತ್ತವನ್ನು ಕೇಂದ್ರದಿಂದ ಪಡೆಯಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಬೇಕು ಎಂದು ಪತ್ರದ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.