ಕುಸ್ತಿ ಪಟು ವಿನೇಶ್ ಫೋಗಟ್, ತಮ್ಮ ನೆಚ್ಚಿನ ಕ್ರೀಡೆಗೆ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Wrestler Vinesh Phogat surprised by bidding farewell to his favorite sport.
ಪ್ಯಾರಿಸ್: ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಹೊಂದಿದ್ದರಿಂದ ಅನರ್ಹಗೊಂಡ ಭಾರತದ ಪ್ರತಿಭಾವಂತ ಕುಸ್ತಿ ಪಟು ವಿನೇಶ್ ಫೋಗಟ್, ತಮ್ಮ ನೆಚ್ಚಿನ ಕ್ರೀಡೆಗೆ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ವಿಭಾಗದಲ್ಲಿ ವಿನೇಶ್ ಫೈನಲ್ ತಲುಪುವ ಮೂಲಕ ನೂತನ ಇತಿಹಾಸ ನಿರ್ಮಿಸಿದ್ದರು. ಜೊತೆಗೆ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಪಟು ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು.
ಆದರೆ ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳಲು ವಿನೇಶ್ ವಿವಿಧ ರೀತಿಯಲ್ಲಿ ಯತ್ನ ನಡಸಿದ ಹೊರತಾಗಿಯೂ 100 ಗ್ರಾಮ್ ತೂಕ ಹೆಚ್ಚಿದ ಕಾರಣ ಅನರ್ಹಗೊಂಡು ಫೈನಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡರು.
ಈ ಘಟನೆಯಿಂದ ತೀವ್ರವಾಗಿ ನಿರಾಸೆ ಹೊಂದಿದ ವಿನೇಶ್ ಫೋಗಟ್, ಕುಸ್ತಿ ವೃತ್ತಿ ಜೀವನವನ್ನು ಕೊನೆಗೊಳಿಸುವ ಅಚ್ಚರಿಯ ನಿರ್ಧಾರವನ್ನು ಅವರ ಕೈಕೊಂಡರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿವೃತ್ತಿ ಕುರಿತು ತಿಳಿಸಿರುವ ವಿನೇಶ್, ಭಾವನಾತ್ಮಕ ಪೋಸ್ಟ್ ಮಾಡುವ ಮೂಲಕ ತಮಗಾದ ದುಃಖವನ್ನು ವ್ಯಕ್ತ ಪಡಿಸಿದ್ದಾರೆ. 'ಅಮ್ಮಾ, ನನ್ನಿಂದ ಕುಸ್ತಿ ಗೆದ್ದಿದೆ. ನಾನು ಸೋತಿದ್ದೇನೆ. ಕ್ಷಮಿಸಿ, ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಮುರಿದುಹೋಗಿದೆ. ಇದಕ್ಕಿಂತ ಹೆಚ್ಚಿನ ಶಕ್ತಿ ನನಗಿಲ್ಲ. 2001 ರಿಂದ 2024 ರವರೆಗಿನ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ, ನಾನು ಯಾವಾಗಲೂ ನಿಮ್ಮೆಲ್ಲರಿಗೂ ಋಣಿಯಾಗಿರುತ್ತೇನೆ, ಕ್ಷಮಿಸಿ.' ಎಂದು ವಿನೇಶ್ ಫೋಗಟ್, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ತೂಕದ ಸಮಸ್ಯೆಯಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹತೆ ಎದುರಿಸುತ್ತಿರುವ ಭಾರತದ ಪ್ರತಿಭಾವಂತ ಕುಸ್ತಿ ಪಟು ವಿನೇಶ್ ಫೋಗಟ್, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದಾರೆ. ವಿನೇಶ್ ಫೋಗಟ್ ಅವರ ಕಾನೂನು ತಂಡವು ಸಿಎಎಸ್ ಎದುರು ತನ್ನ ವಾದ ಮಂಡಿಸಲಿದ್ದು, ತಡ ರಾತ್ರಿ ವರೆಗೆ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ತೀರ್ಪು ವಿನೇಶ್ ಪರ ಬರುವ ನಿರೀಕ್ಷೆಯಿದೆ. ಚಿನ್ನದ ಪದಕ ಕೈತಪ್ಪಿದರೂ ಕೂಡ ಬೆಳ್ಳಿ ಪದಕ ವಾದರೂ ಲಭಿಸುವ ನಿರೀಕ್ಷೆಯಿದೆ.