ಹೆಪಟೈಟಿಸ್ ಜಾಗೃತಿ ಕಾಲ್ನಡಿಗೆ ಜಾಥಾ ಹಾಗೂ ಉಚಿತ ತಪಾಸಣಾ ಶಿಬಿರಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ
ಬೆಂಗಳೂರು : ವಿಶ್ವ ಕಾಮಾಲೆ ದಿನದ ಅಂಗವಾಗಿ ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ ವತಿಯಿಂದ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಎ, ಗೌತಮ್ ನರ್ಸಿಂಗ್ ಕಾಲೇಜ್ ಹಾಗೂ ಸರ್ವೋದಯ ಸ್ಕೂಲ್ ಆಫ್ ನರ್ಸಿಂಗ್ ಸಹಯೋಗದೊಂದಿಗೆ ಮಹಾಲಕ್ಷ್ಮಿಪುರದಲ್ಲಿರುವ ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ ಆವರಣದಲ್ಲಿ ಆಯೋಜಿಸಲಾಗಿದ್ದ ಹೆಪಟೈಟಿಸ್ ಬಿ, ಸಿ ಜಾಗೃತಿ ಕಾಲ್ನಡಿಗೆ ಜಾಥಾ ಹಾಗೂ ಉಚಿತ ತಪಾಸಣಾ ಶಿಬಿರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರು ಚಾಲನೆ ನೀಡಿದರು.
ಈ ವೇಳೆ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಎ ರಾಜ್ಯಪಾಲರಾದ ಲಯನ್ ಎನ್ ಮೋಹನ್ ಕುಮಾರ್ ಪಿಎಂಜೆಎಫ್, ಮೊದಲನೇ ಉಪ ರಾಜ್ಯಪಾಲರಾದ ಡಾ. ಜಿ ಮೋಹನ್ ಪಿಎಂಜೆಎಫ್, ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ ನ ನಿರ್ದೇಶಕರಾದ ಡಾ. ಉಮೇಶ್ ಜಾಲಿಹಾಳ್ ಡಾಕ್ಟರ್ ಇರ್ಷದ್ ಹಾಲಿ ಎಚ್, ಡಾಕ್ಟರ್ ಪುನೀತ್ ಬಿ ಎಸ್, ಹಾಗೂ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಸದಸ್ಯರು ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.
ಸಚಿವ ದಿನೇಶ್ ಗುಂಡೂರಾವ್ ರವರು ಮಾತನಾಡಿ ಕರ್ನಾಟಕ ಗ್ಯಾಸ್ಟ್ರೋ ಸೆಂಟರ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ, ಹೆಪಟೈಟಿಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕವಾಗಿದೆ ಹೆಪಟೈಟಿಸ್ ಬಿ ಅಂಡ್ ಸಿ ವ್ಯಾಕ್ಸಿನೇಷನ್ ಹಾಗೂ ನಮ್ಮ ಜೀವನ ಶೈಲಿಗಳಿಂದ ಗುಣಪಡಿಸಬಹುದು. ಆದ್ದರಿಂದ ಎಲ್ಲರೂ ಜಾಗೃತರಾಗಿ ಹೆಪಟೈಟಿಸ್ ಮುಕ್ತ ದೇಶ ಮಾಡಲು ಎಲ್ಲರೂ ಮುಂದಾಗಬೇಕು ಎಂದರು.
ಲಯನ್ ಎನ್ ಮೋಹನ್ ಕುಮಾರ್ ರವರು ಮಾತನಾಡಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಸ್ಯಾಮ್ಯುಯೆಲ್ ಬ್ಲೂಮ್‌ಬರ್ಗ್ ಅವರ ಜನ್ಮದಿನವಾದ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನ ಎಂದು ಆಚರಿಸಲಾಗುತ್ತದೆ. ಈ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷ ಜಾಗೃತಿ ಮತ್ತು ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ನಮ್ಮ ಲಯನ್ಸ್ ಇಂಟರ್ನ್ಯಾಷನಲ್ ವತಿಯಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಅದರಂತೆ ಕಾಮಾಲೆ ಜಾಗೃತಿ ಕಾರ್ಯಕ್ರಮದಲ್ಲಿ ನಮ್ಮ ಲಯನ್ಸ್ ಕ್ಲಬ್ ಜೊತೆಗೂಡಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.
ಡಾ. ಉಮೇಶ್ ಜಾಲಿಹಾಳ್ ರವರು ಮಾತನಾಡಿ ಹೆಪಟೈಟಿಸ್ ಕಾಯಿಲೆಯು ಬಿ ಮತ್ತು ಸಿ ವೈರಸ್, ಮದ್ಯಪಾನ, ಆಹಾರ ಪದ್ಧತಿ ಹಾಗೂ ನಮ್ಮ ಜೀವನ ಶೈಲಿಗಳಿಂದ ಉಂಟಾಗುತ್ತದೆ. ಆದ್ದರಿಂದ ಎಲ್ಲರೂ ತಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಿಕೊಳ್ಳುವುದರಿಂದ ಕಾಮಾಲೆ ಮುಕ್ತ ಮಾಡಬಹುದು ಎಂಬ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.